12 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

dc_20240411005839674.jpg
Published on

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಕರ್ತವ್ಯ ದಿನಗಳಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯರೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿಗಳ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
 ನಾಮಪತ್ರ ಸಲ್ಲಿಕೆಗೆ ಏ. 19 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಲು ರಾಷ್ಟ್ರೀಕೃತ, ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳು ಇದೇ ಕ್ಷೇತ್ರದ ಮತದಾರರಾದ ಒಬ್ಬರು ಸೂಚಕರಾಗಿರಬೇಕು. ಮಾನ್ಯತೆ ಪಡೆಯದ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಇದೇ ಕ್ಷೇತ್ರದ 10 ಮತದಾರರು ಸೂಚಕರಾಗಿರಬೇಕು ಎಂದು ಹೇಳಿದರು.
 ನಾಮಪತ್ರಗಳ ಪರಿಶೀಲನೆ ಏ. 20 ರಂದು ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏ. 22 ರ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶವಿದೆ ಎಂದು ತಿಳಿಸಿದರು.
 ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1946 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 387 ಕ್ರಿಟಿಕಲ್, 11 ವಲ್ನರೆಬಲ್ ಮತಗಟ್ಟೆಗಳಿವೆ. 8,50,393 ಪುರುಷ, 8,55,079 ಮಹಿಳೆಯರು, 135 ಇತರೆ ಹಾಗೂ 562 ಸೇವಾ ಮತದಾರರು ಸೇರಿ 17,06,169 ಒಟ್ಟು ಮತದಾರರಿದ್ದಾರೆ ಎಂದರು.
 ...
 * ಮಾದರಿ ನೀತಿ ಸಂಹಿತೆ
 ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್, ಫ್ಲೈಯಿಂಗ್ ಸ್ಕ್ವಾಡ್, ಅಬಕಾರಿ ಜಾಗೃತ ದಳ, ವಾಣಿಜ್ಯ ತೆರಿಗೆ ಇಲಾಖೆ ತಂಡ, ಪೊಲೀಸ್ ಅಧಿಕಾರಿಗಳು ಒಟ್ಟು ರೂ. 1.81 ಕೋಟಿ ರೂ. ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
 ನಗದು ಅಲ್ಲದೆ 400 ಟವರ್ ಫ್ಯಾನ್, 56.36 ಗ್ರಾಂ ಚಿನ್ನ, 579 ಸೀರೆ, 17 ಮೊಬೈಲ್, 300 ಜೀನ್ಸ್ ಪ್ಯಾಂಟ್, ಅಬಕಾರಿ ಇಲಾಖೆಯಿಂದ 2.94 ಲಕ್ಷ ರೂ. ಮೌಲ್ಯದ 709.145 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ 1.47 ಲಕ್ಷ ರೂ. ಮೌಲ್ಯದ 372.184 ಲೀಟರ್ ಮದ್ಯ ವಶಪಡಿಸಿಕೊಂಡಿದ್ದು ಇಲ್ಲಿಯವರೆಗೆ 290 ಎಫ್‌ಐಆರ್ ದಾಖಲಿಸಲಾಗಿದೆ.
 ...
 * ಮನೆಯಲ್ಲಿಯೆ ಮತದಾನ
 ಆಯೋಗವು 85 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಮನೆಯಲ್ಲಿಯೆ ಮತದಾನ ಮಾಡಲು ಅವಕಾಶ ನೀಡಿದ್ದು ಇವರಿಗೆ 12ಡಿ ವಿತರಣೆ ಮಾಡಲಾಗಿದೆ. 85 ವರ್ಷ ಮೇಲ್ಪಟ್ಟ 12845 ಮತದಾರರಲ್ಲಿ 1473 ಮಂದಿ 12ಡಿ ನೀಡಿರುವರು. 22922 ಅಂಗವಿಕಲ ಮತದಾರರಲ್ಲಿ 876 ಜನ ಮನೆಯಲ್ಲಿ ಮತದಾನ ಮಾಡುತ್ತೇವೆ ಎಂದು ಘೋಷಣಾ ಪತ್ರ ನೀಡಿದ್ದಾರೆ.
 ...
 * ಸಿ-ವಿಜಿಲ್, ಟೋಲ್ಫ್ರೀ
 ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಸಿ-ವಿಜಿಲ್ ಆ್ಯಪ್ ಮೂಲಕ 471 ದೂರುಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಬಹುತೇಕ ನಾಮಫಲಕಗಳಲ್ಲಿ ಚುನಾಯಿತ ಪ್ರತಿನಿಧಿಗಳ ಹೆಸರಿದೆ ಎಂಬ ವಿಷಯಗಳಿವೆ. 1950 ಉಚಿತ ಸಹಾಯವಾಣಿಗೆ 345 ಕರೆಗಳು ಬಂದಿದ್ದು ಚುನಾವಣೆಗೆ ಸಂಬಂಧಿಸಿದ, ಮತದಾರರ ಪಟ್ಟಿ, ಹೆಸರು ಸೇರ್ಪಡೆಗೆ ಸಂಬಂಧಿಸಿದ ಕರೆಗಳಾಗಿದ್ದು ಕರೆ ಮಾಡಿದವರಿಗೆ ಮಾಹಿತಿ ನೀಡಲಾಗಿದೆ.
 ...
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net