ಖಾತ್ರಿ ಯೋಜನೆಯಡಿ ದಿನಗೂಲಿ ಏರಿಕೆ ಮಾಡಿ

dvg-sphoorti.jpg
Published on

ದಾವಣಗೆರೆ  : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು 150ಕ್ಕೆ ಹಾಗೂ ದಿನಗೂಲಿಯನ್ನು 400 ರೂ.ಗಳಿಗೆ ಏರಿಕೆ ಮಾಡಬೇಕು ಎಂದು ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.  ನಗರದ ಹರಿಹರ ರಸ್ತೆಯಲ್ಲಿರುವ ಎ.ಕೆ.ಎಸ್ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ, ‘ಸ್ಫೂರ್ತಿ’ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಬೆಳ್ಳಿಹಬ್ಬ ಸಮಾರಂಭದಲ್ಲಿ ಮಾತನಾಡಿದರು.  ಯಾವುದೇ ಸರ್ಕಾರವಿರಲಿ ಬಡವರ ಪರವಾಗಿ ಕೆಲಸ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರೆ ಅದರ ವಿರುದ್ಧ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.  ಉದ್ಯೋಗ ಅರಸಿ ವಲಸೆ ಹೋಗುವ ಕುಟುಂಬಗಳ ಮಕ್ಕಳ ಶಿಕ್ಷಣಕ್ಕಾಗಿ ನ್ಯಾಮತಿ ತಾಲೂಕು ಸೂರಗೊಂಡನ ಕೊಪ್ಪದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ವಸತಿಶಾಲೆ ಮತ್ತು ರಾಣಿ ಚನ್ನಮ್ಮ ವಸತಿಶಾಲೆಗಳಿಗೆ 50 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒದಗಿಸಿದ್ದಾರೆ ಎಂದು ತಿಳಿಸಿದರು.  ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗಿದೆ. ವಾಸಿಸುವನೇ ಮನೆಯ ಒಡೆಯ ಎಂಬ ಕಾರ್ಯಕ್ರಮವು 6ನೇ ಗ್ಯಾರಂಟಿಯಾಗಿದ್ದು ಹಕ್ಕುಪತ್ರ ನೀಡುವ ಕೆಲಸ ಆಗುತ್ತಿದೆ ಎಂದು ಹೇಳಿದರು.  ಬಡವರು, ಮಹಿಳೆಯರು, ದುರ್ಬಲ ವರ್ಗದವರು ಅನ್ಯಾಯ, ಅಸಮಾನತೆ, ದೌರ್ಜನ್ಯದ ವಿರುದ್ಧ ಹೋರಾಟ ನಿಲ್ಲಿಸಬಾರದು. ಅದಕ್ಕೆ ತಾವೂ ಕೈಜೋಡಿಸುವುದಾಗಿ ತಿಳಿಸಿದರು.  ಚನ್ನಗಿರಿಯ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಬಡವರ, ಭೂರಹಿತರ, ಕೂಲಿಕಾರರ, ಅಂಗವಿಕಲರ, ಬಗರ್ ಹುಕುಂ ರೈತರ, ಅರಣ್ಯ ಜಮೀನು ಅವಲಂಬಿತ ಇತ್ಯಾದಿ ವರ್ಗದವರಲ್ಲಿ ಜಾಗೃತಿ ಮೂಲಕ ಸ್ವಾವಲಂಬಿ ಜೀವನದ ಪಾಠವನ್ನು ಸ್ಫೂರ್ತಿ ಸಂಸ್ಥೆ ಕಲಿಸಿದೆ ಎಂದರು.  ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಫೇವಾರ್ಡ್ ಕರ್ನಾಟಕದ ಮಾಜಿ ಅಧ್ಯಕ್ಷ ರಾಯ್ ಡೇವಿಡ್, ವಕೀಲ ರಾಘವೇಂದ್ರ ನಾಯ್ಕ ಮಾತನಾಡಿದರು. ಸಂಸ್ಥಾಪಕ ಕಾರ್ಯದರ್ಶಿ ಕೆ.ಬಿ. ರೂಪಾ ನಾಯ್ಕ, ಅಧ್ಯಕ್ಷ ಎನ್.ಎಸ್. ಜಯಣ್ಣ, ರಜತೋತ್ಸವ ಕುರಿತು ಪ್ರಾಸ್ತಾವಿಕ ನುಡಿದರು.  ಜಿ.ಪಂ. ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಆಶಾ ಉಮೇಶ್, ಫೆವಾರ್ಡ್-ಕೆ ಅಧ್ಯಕ್ಷ ಮಹೇಶಚಂದ್ರ ಗುರು, ವನಸಿರಿ ಸಂಸ್ಥೆಯ ಮುಖ್ಯಸ್ಥ ಎಸ್.ಡಿ. ಬಳಿಗಾರ, ಡಾ. ಉಮೇಶ್ ಹಿರೇಮಠ, ಭ್ರಷ್ಟಾಚಾರ ವಿರೋಧಿ ವೇದಿಕೆಯ ಗುರುಪಾದಯ್ಯ ಹಿರೇಮಠ, ಪತ್ರಕರ್ತ ನರೇನಹಳ್ಳಿ ಅರುಣ ಕುಮಾರ್ ಇದ್ದರು.  ಕಾರ್ಮಿಕ ಅಧಿಕಾರಿ ಅರವಿಂದ ಆರ್, ಜಿಲ್ಲಾ ಕೂಲಿ ಕಾರ್ಮಿಕರ ಸಂಘಟನೆಯ ಗುಡದಯ್ಯ, ಉಪಾಧ್ಯಕ್ಷೆ ವೀರಮ್ಮ, ಸುಗ್ರಾಮದ ಅಧ್ಯಕ್ಷೆ ಅನಸೂಯಮ್ಮ ಸಂಸ್ಥೆಯ ಬೆಳ್ಳಿ ಹಬ್ಬದ ಲೋಗೋ ಅನಾವರಣ ಮಾಡಿದರು.  ಬೆಳಗ್ಗೆ ಹೈಸ್ಕೂಲ್ ಮೈದಾನದಿಂದ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ಡೊಳ್ಳು ಹಾಗೂ ತಮಟೆ ಬಾರಿಸುವ ಮೂಲಕ ಸಹಾಯಕ ಕಾರ್ಮಿಕ ಆಯುಕ್ತ ಡಾ. ಅವಿನಾಶ್ ನಾಯ್ಕ ಚಾಲನೆ ನೀಡಿದರು. ಡೊಳ್ಳು ಕುಣಿತ, ಹೊನ್ನಾಳಿಯ ಹನುಮಸಾಗರದ ಲಂಬಾಣಿ ನೃತ್ಯ, ಮಕ್ಕಳಿಂದ ಜಾನಪದ ನೃತ್ಯ, ಸ್ಫೂರ್ತಿ ಸಂಸ್ಥೆಯ ಕಲಾ ತಂಡದಿಂದ ಕೋಲಾಟ, ಭಟ್ರಹಳ್ಳಿ ಧನಂಜಯ, ಜಿ.ಎನ್. ಸಿಂಹ ಅವರ ಹೋರಾಟದ ಹಾಡು ಮೆರವಣಿಗೆಯ ಆಕರ್ಷಣೆಯಾಗಿತ್ತು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net