

ದಾವಣಗೆರೆ : ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಪತ್ರಿಕಾ ವಿತರಕರನ್ನು ಗುರುತಿಸಿ ಪತ್ರಿಕೆಗಳನ್ನು ವಿತರಣೆ ಮಾಡಲು ಸೂಕ್ತ ಜಾಗವನ್ನು ನೀಡಬೇಕು ಎಂದು, ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್. ಚಂದ್ರು ಹೇಳಿದರು. ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ, ನಗರದಲ್ಲಿ ಪತ್ರಿಕೆಗಳನ್ನು ಸರಬರಾಜು ಮಾಡುವ ಸ್ಥಳವಾದ ಪ್ರವಾಸಿ ಮಂದಿರ ರಸ್ತೆಯಲ್ಲಿ ಬುಧವಾರ, ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಿಕೆ ವಿತರಣೆ ಮಾಡಲು ಸೂಕ್ತವಾದ ಸ್ಥಳವಿಲ್ಲ. ಎಲ್ಲೆಂದರಲ್ಲಿ ಕುಳಿತುಕೊಳ್ಳಬೇಕಿದೆ. ವಿದ್ಯುತ್, ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಬೇಕು. ಹಲವಾರು ಪತ್ರಿಕಾ ವಿತರಕರು ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಿದ್ದು ಅವರಿಗೆ ಸೂರು ಕಲ್ಪಿಸಬೇಕು. ಎಲೆಕ್ಟ್ರಿಕಲ್ ಬೈಕನ್ನು ಸಬ್ಸಿಡಿ ದರದಲ್ಲಿ ನೀಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ಸ್ವ-ನಿಧಿ ಯೋಜನೆ ಅಡಿಯಲ್ಲಿ ಪತ್ರಿಕಾ ವಿತರಕರನ್ನು ಗುರುತಿಸಿ ಸಾಲ ಸೌಲಭ್ಯ ನೀಡಿದ್ದಾರೆ. ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಅಪಘಾತವಾದಲ್ಲಿ ಅವರಿಗೆ ಆಸ್ಪತ್ರೆ ವೆಚ್ಚ, ವಿಮಾ ಸೌಲಭ್ಯದ ಸ್ಪಂದನೆ ರಾಜ್ಯ ಸರ್ಕಾರದ ವತಿಯಿಂದ ದೊರಕಿದೆ ಎಂದು ತಿಳಿಸಿದರು. ಸಂಘದ ಅರುಣ್ ಕುಮಾರ್ ಹಾಗೂ ಟಿ.ಪಿ. ನಾಗರಾಜ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿಹಿ ಹಂಚಲಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಪತ್ರಿಕಾ ವಿತರಕರು ಇದ್ದರು.