

ದಾವಣಗೆರೆ : ಹೊಸ ವರ್ಷದಲ್ಲಿ ಜಿಲ್ಲೆಯ ಜನರು ಹಲವು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಸತಿ, ಕುಡಿಯುವ ನೀರು, ಮೂಲಸೌಲಭ್ಯ, ಏತ ನೀರಾವರಿ ಯೋಜನೆಗಳು ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಒಂದೊಂದು ತಾಲೂಕಿನಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. 2025 ರಲ್ಲಿ ಅವುಗಳಿಗೆ ಸ್ಪಂದನೆ ಸಿಗಲಿ ಎನ್ನುವ ಆಶಯ ವ್ಯಕ್ತವಾಗಿದೆ. ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಬೇಕು ಎಂಬುದು ಬಹು ದಿನಗಳ ನಿರೀಕ್ಷೆ. ಅದಕ್ಕಾಗಿ ಭೂಮಿಯನ್ನು ಗುರುತಿಸಿ ಸರ್ವೇ ಮಾಡಿದ್ದು ಬಿಟ್ಟರೆ ಯೋಜನೆ ಟೇಕ್‌ಆಫ್ ಆಗಿಲ್ಲ. ಈ ವರ್ಷದಲ್ಲಾದರೂ ಏರ್‌ಪೋರ್ಟ್ ಕನಸಿಗೆ ರೆಕ್ಕೆ ಮೂಡುವುದೇ ಎನ್ನುವ ಪ್ರಶ್ನೆ ಕೇಳಿಬಂದಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ನಾಲೆಗಳಲ್ಲಿರುವ ಹೂಳನ್ನು ತೆರವು ಮಾಡಬೇಕಿದೆ. ಅಲ್ಲಿ ಬೆಳೆದಿರುವ ಗಿಡಗಳನ್ನು ತೆಗೆಸಿ ನೀರು ಸರಾಗವಾಗಿ ಕೊನೆಯ ಭಾಗಕ್ಕೆ ತಲುಪುವಂತೆ ಮಾಡಬೇಕಿದೆ. ಅಕ್ರಮ ಪಂಪ್‌ಸೆಟ್‌ಗಳನ್ನು ತೆರವು ಮಾಡಬೇಕಿದೆ. ಜಿಲ್ಲೆಯ ವಿವಿಧೆಡೆ ಸಂಚಾರ ಸಮಸ್ಯೆಗೆ ಮುಕ್ತಿ ಹಾಡಬೇಕಿದೆ. ದಾವಣಗೆರೆಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಸುವ ವಿಷಯ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದೆ. ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕುರಿತು ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸುವುದೆ ಎಂದು ಕಾದು ನೋಡಬೇಕಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಉದ್ಘಾಟನೆಯಾದರೆ ಹೊನ್ನಾಳಿ ಮತ್ತು ಚನ್ನಗಿರಿ ಭಾಗದ ಹಲವು ಕೆರೆಗಳಿಗೆ ನೀರು ಹರಿದು ಬರಲಿದೆ. ಮಾಯಕೊಂಡ ತಾಲೂಕು ರಚನೆಯಾಗಬೇಕು ಎನ್ನುವ ಬೇಡಿಕೆ ಹಳೆಯದು. ಆ ನಿಟ್ಟಿನಲ್ಲಿ ಒಂದಿಷ್ಟು ಪ್ರಗತಿ ಆಗಲಿ ಎನ್ನುವುದು ಅಲ್ಲಿನ ಜನರ ನಿರೀಕ್ಷೆಯಾಗಿದೆ. ... * ಭೈರನಪಾದ ಯೋಜನೆ ಹರಿಹರ ತಾಲೂಕಿನ ಸುಮಾರು 15 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದ ಭೈರನಪಾದ ಏತ ನೀರಾವರಿ ಯೋಜನೆ ಅರ್ವೇ ಆಗಿದ್ದು ಸಚಿವ ಸಂಪುಟದ ಅನುಮೋದನೆಯೂ ದೊರಕಿದೆ. ಈ ವರ್ಷದಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದರೆ ರೈತರ ಬದುಕು ಹಸನಾದೀತು ಎನ್ನುವ ನಿರೀಕ್ಷೆಯಿದೆ. ಇದರಿಂದ ಆ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗುವುದರಿಂದ ಕುಡಿಯುವ ನೀರಿನ ಬವಣೆಯೂ ನೀಗಲಿದೆ. ತುಂಗಭದ್ರಾ ನದಿ ತೀರದಲ್ಲಿರುವ ಹರಿಹರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಾರ್ಯರೂಪಕ್ಕೆ ಬರಲಿ ಎನ್ನುವ ಹಾರೈಕೆ ಸ್ಥಳೀಯರದಾಗಿದೆ. ... * ಭದ್ರಾ ಮೇಲ್ದಂಡೆ ಜಗಳೂರು ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಆಮೆ ಗತಿಯಲ್ಲಿ ಸಾಗಿದೆ. ಹೊಸ ವರ್ಷದ ಅಂತ್ಯದೊಳಗಾಗಿ ಉದ್ಘಾಟನೆಯಾಗಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಇದರಿಂದ ಬರದ ನಾಡು ಹಸಿರಿನ ಬೀಡಾಗಲಿದೆ. ರಂಗಯ್ಯನ ದುರ್ಗ ವನ್ಯಜೀವಿ ಧಾಮವನ್ನು ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಅಲ್ಲಿನ ಶಾಸಕ ಬಿ. ದೇವೇಂದ್ರಪ್ಪ ಆಸಕ್ತಿ ವಹಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಿರುಚಿತ್ರ ನಿರ್ಮಾಣವಾಗಿದ್ದು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಕೊಣಚಕಲ್ಲು ಗುಡ್ಡದಲ್ಲಿರುವ ಕವಿ ಮಹಾಲಿಂಗ ರಂಗರ ಸಮಾಧಿಯ ಅಭಿವೃದ್ಧಿ, ಜಗಳೂರು ಪಟ್ಟಣದ ಮುಖ್ಯ ರಸ್ತೆಗಳ ವಿಸ್ತರಣೆ ಆಗಬೇಕಿದೆ. ... * ಚನ್ನಗಿರಿ ತಾಲೂಕಿನಲ್ಲಿ ಕೊನೇ ಭಾಗದ ಕೆರೆಗಳಿಗೆ ನೀರು ತಲುಪಬೇಕಿದೆ * ಚನ್ನಗಿರಿ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ಮಶಾನಕ್ಕೆ ನಿಗದಿಯಾಗಬೇಕಿದೆ ಜಾಗ * ಅಡಕೆ ನಾಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಉದ್ಘಾಟನೆ ಆಗಬೇಕಿದೆ * ನ್ಯಾಮತಿ, ಮಾಯಕೊಂಡದಲ್ಲಿ ಬಸ್ ನಿಲ್ದಾಣ ಆಗಬೇಕಿದೆ * ನೂತನ ತಾಲೂಕಿಗೆ ಹೊನ್ನಾಳಿಯ ಅವಲಂಬನೆ ತಪ್ಪಬೇಕಿದೆ * ಗೋವಿನಕೋವಿ-ರಾಂಪುರ ಮಾರ್ಗದಲ್ಲಿ ಸೇತುವೆ ನಿರ್ಮಾಣ ಆಗಬೇಕಿದೆ * ದಾವಣಗೆರೆ ತಾಲೂಕಿನ ಲೋಕಿಕೆರೆ ಹೋಬಳಿ ಕೇಂದ್ರದ ಬೇಡಿಕೆ * ಮಾಯಕೊಂಡಕ್ಕೆ ಬೇಕಿದೆ ಪ್ರತ್ಯೇಕ ತಹಸೀಲ್ದಾರ್