

ದಾವಣಗೆರೆ: ದುರ್ಬಲ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರೃ ದೊರೆತಾಗ ಅಭಿವೃದ್ಧಿ ಕಾಣಲಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಸಾಬಪ್ಪ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹದ ಅಂಗವಾಗಿ ನಾಯಕರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ದುರ್ಬಲ ವರ್ಗಗಳ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಶತಮಾನಗಳಿಂದಲೂ ಹಲವು ಸಮುದಾಯಗಳು ಶೋಚನೀಯವಾಗಿ ಬದುಕುತ್ತಿವೆ. ಈ ಶೋಷಿತರು ನ್ಯಾಯಯುತ ಹಕ್ಕುಗಳನ್ನು ಗಳಿಸಿದಾಗ ಸಂವಿಧಾನದ ಆಶಯಗಳು ಫಲಪ್ರದವಾಗಲಿವೆ. ಸರ್ಕಾರಗಳು ಸೌಲಭ್ಯ ವಂಚಿತರಿಗೆ ಶೈಕ್ಷಣಿಕ ಮತ್ತಿತರೆ ಅಗತ್ಯ ನೆರವು ನೀಡಿ ಸಬಲರನ್ನಾಗಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, ದೇಶದ ಬಹುಪಾಲು ಜನಾಂಗಗಳಲ್ಲಿ ಬಡತನವಿದ್ದು, ಇದು ನಿವಾರಣೆಯಾದಲ್ಲಿ ಸಮಸಮಾಜ ಸೃಷ್ಟಿಯಾಗಲಿದೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‌ಕುಮಾರ್ ಮಾತನಾಡಿ, ಭಾರತ ಸಂವಿಧಾನವು ದುರ್ಬಲ, ಶೋಷಿತರ ಪರವಾಗಿದ್ದು, ಅವುಗಳ ನಿಜವಾದ ಅನುಷ್ಠಾನವಾಗಬೇಕು. ಗಳಿಸಿದ ಸ್ವಾತಂತ್ರೃ ಅರ್ಥಪೂರ್ಣವಾಗಬೇಕಾದರೆ ಈ ವರ್ಗಗಳಿಗೆ ಸಮಾನತೆ ಕಲ್ಪಿಸುವುದು ಮುಖ್ಯ ಎಂದು ಅಭಿಪ್ರಾಯ ಪಟ್ಟರು.
ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ.ವೀರಣ್ಣ, ವಕೀಲ ಎನ್.ಎಂ.ಆಂಜನೇಯ ಮಾತನಾಡಿದರು. ವಕೀಲರಾದ ಅನೀಸ್ ಪಾಷಾ, ಹಾಸ್ಟೆಲ್ ನಿರ್ದೇಶಕ ಹೂವಿನಮಡು ಚಂದ್ರಪ್ಪ, ಮಂಜುನಾಥ್ ಇತರರಿದ್ದರು.