

ದಾವಣಗೆರೆ: ನಕಲಿ ಎಟಿಎಂ ಕಾರ್ಡ್ ತಯಾರಿಸಿ, ಗ್ರಾಹಕರ ಹಣ ಡ್ರಾ ಮಾಡುತ್ತಿದ್ದ ಉತ್ತರಪ್ರದೇಶ ರಾಜ್ಯದ ವಂಚಕರಿಬ್ಬರನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಪ್ರತಾಪ್‌ಘರ್ ಜಿಲ್ಲೆಯ ಜಿತ್ವಾರ ವಾಸಿಗಳಾದ ಬ್ರಿಜ್‌ಬನ್ ಸರೋಜ್, ಹರಿಲಾಲ್ ಮಹಾರಾಣಿ ಬಂಧಿತ ಆರೋಪಿಗಳು.
ಎಟಿಎಂ ಬಳಸಲು ಬಾರದ ಗ್ರಾಹಕರನ್ನು ಗುರುತಿಸಿ, ಅವರಿಗೆ ಹಣ ಬಿಡಿಸಿಕೊಡುವ ನೆಪದಲ್ಲಿ ಡಾಟಾವನ್ನು ಸ್ವೈಪ್ ಯಂತ್ರದ ಮೂಲಕ ನಕಲು ಮಾಡಿ, ಅವರ ಪಿನ್ ನಂಬರ್ ಬರೆದುಕೊಂಡು ನಕಲಿ ಎಟಿಎಂ ಕಾರ್ಡ್ ತಯಾರಿಸಿ ವಂಚನೆ ಮಾಡುತ್ತಿದ್ದರು.
ಹರಪನಹಳ್ಳಿ ವಾಸಿ ಬಂಡಿ ರಾಜಪ್ಪ ನೀಡಿದ್ದ ದೂರು ಸೇರಿದಂತೆ ಎರಡು ಪ್ರಕರಣ ದಾವಣಗೆರೆ ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದವು. ಜಿಲ್ಲೆಯಲ್ಲಿ 50 ಸಾವಿರ ರೂ. ವಂಚನೆ ಮಾಡಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಂಚಿಸಿರುವ ಆರೋಪಿತರ ವಿರುದ್ಧ 85ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆೆ ಎಂದು ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮುಷ್ತಾಕ್ ಅಹ್ಮದ್ ತಿಳಿಸಿದ್ದಾರೆ.