

ದಾವಣಗೆರೆ : ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಡಳಿತ ತಮ್ಮ ಮೇಲೆ ಪ್ರತಿಬಂಧಕಾಜ್ಞೆ ಹೊರಡಿಸಿರುವುದು ಖಂಡನೀಯ. ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗುವುದಾಗಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಗಿಗುಡ್ಡ ಪ್ರಕರಣ ಸಂಬಂಧ ಅಲ್ಲಿನ ಹಿಂದುಗಳಿಗೆ ಸಾಂತ್ವನ ಹೇಳಲು ನಾನು ಬಸ್‌ನಲ್ಲಿ ಹೊರಟಿದ್ದ ಸಂದರ್ಭದಲ್ಲಿ ರಾತ್ರಿ 2 ಗಂಟೆ ಸಮಯದಲ್ಲಿ ಮಾಸ್ತಿಕಟ್ಟೆ ಬಳಿ ಪೊಲೀಸರು ತಡೆದರು ಎಂದು ಹೇಳಿದರು.
ತಾವು ಅ. 17ರಿಂದ 30 ದಿನಗಳ ಕಾಲ ಶಿವಮೊಗ್ಗ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ರಾಜ್ಯದಲ್ಲಿ ಭಯೋತ್ಪಾದಕರು ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ರಾಗಿಗುಡ್ಡಕ್ಕೆ ಹೋಗುವಂತಿಲ್ಲ ಎಂದರೆ ಹೇಗೆ ಎಂದು ಸರ್ಕಾರವನ್ನುಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದು ನಾಯಕರ ಮೇಲೆ ಪ್ರಕರಣ ದಾಖಲಿಸುವುದು ಹಾಗೂ ಹಿಂದು ಸಂಘಟನೆಗಳನ್ನು ಹತ್ತಿಕ್ಕುವ ಕೆಲಸವನ್ನು ನಿರಂತರ ಮಾಡುತ್ತಿದೆ. ರಾಗಿಗುಡ್ಡಕ್ಕೆ ಹೋಗದಂತೆ ತಮ್ಮನ್ನು ತಡೆದಿರುವುದು ಸರ್ಕಾರದ ಹಿಂದು ವಿರೋಧಿ ನೀತಿ ಸ್ಪಷ್ಟವಾಗಿದೆ ಎಂದು ಹೇಳಿದರು.
ಯಾವುದೇ ಮೆರವಣಿಗೆ ಹಾಗೂ ಸಭೆ ನಡೆಸಲು ತಾವು ರಾಗಿಗುಡ್ಡಕ್ಕೆ ಹೋಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರತಿಬಂಧಕಾಜ್ಞೆ ತಡೆಗೆ ಹೈಕೋಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು. ಬರುವ ದಿನಗಳಲ್ಲಿ ಅಲ್ಲಿಗೆ ತೆರಳಿ ಯಾವುದೇ ಪ್ರಚೋದನೆ ಇಲ್ಲದೆ ಸಾಂತ್ವನ ಹೇಳುವ ಕೆಲಸ ಮಾಡಲಾಗುವುದು ಎಂದರು.
ಶ್ರೀರಾಮಸೇನೆಯಿಂದ ನವೆಂಬರ್ ತಿಂಗಳಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ‘ಮೋದಿ ಗೆಲ್ಲಿಸಿ ದೇಶ ಉಳಿಸಿ ಅಭಿಯಾನ’ ನಡೆಸಲಾಗುವುದು ಎಂದು ಹೇಳಿದರು.