

ದಾವಣಗೆರೆ : ವೃತ್ತಿ ರಂಗಭೂಮಿ ಹಾಗೂ ವೃತ್ತಿ ರಂಗಸಂಗೀತ ವೈಭವ ಮತ್ತೆ ಮರುಕಳಿಸಬೇಕು ಎಂದು ತುಮಕೂರಿನ ಹಿರಿಯ ರಂಗಕರ್ಮಿ ಡಾ.ಲಕ್ಷ್ಮಣದಾಸ್ ಆಶಿಸಿದರು. ವೃತ್ತಿ ರಂಗಭೂಮಿ ರಂಗಾಯಣದಿಂದ ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ರಂಗ ಸಂಗೀತ’ ವೃತ್ತಿರಂಗ ಗೀತೆಗಳ ಕಲಿಕಾ ಕಾರ್ಯಾಗಾರದ ಸಮಾರೋಪ ಮತ್ತು ಅಭಿನಯ ಸಂಗೀತ ಪ್ರದರ್ಶನ ಕಾರ್ಯಕ್ರಮದಲ್ಲಿ ಸಮಾರೋಪ ನುಡಿಗಳನ್ನಾಡಿದರು. ಹಿಂದೆ ನಾಟಕ ಕಂಪನಿಗಳಲ್ಲಿ ರಂಗಗೀತೆಗಳು ಕೇಳುಗರಿಗೆ ರೋಮಾಂಚನ ಉಂಟು ಮಾಡುತ್ತಿದ್ದವು. ಈ ಪರಂಪರೆ ಮುಂದುವರಿಯಬೇಕು. ಭೂಮಿ ಎನ್ನುವ ಹೆಸರು ಸಾಹಿತ್ಯ ಹಾಗೂ ಸಂಗೀತ ಸೇರಿ ಯಾವ ಪ್ರಾಕಾರಕ್ಕೂ ಇಲ್ಲ. ರಂಗಭೂಮಿಗೆ ಮಾತ್ರ ಭೂಮಿ ಎನ್ನುತ್ತಾರೆ. ಇದನ್ನು ಉಳಿಸಿ ಬೆಳೆಸಬೇಕು ಎಂದರು. ವೃತ್ತಿ ರಂಗಭೂಮಿ ರಂಗಾಯಣ ಕಲಾವಿದರ ಹೆಮ್ಮೆ. ಇದು ಕಲಾವಿದರಿಗೆ ರಂಗಶಿಸ್ತನ್ನು ಕಲಿಸುತ್ತದೆ. ಅದು ಎತ್ತರಕ್ಕೆ ಬೆಳೆದಷ್ಟು ಕಲಾವಿದರು ಹತ್ತಿರಕ್ಕೆ ಬರುತ್ತಾರೆ. ಕಲಾವಿದರು ಇದಕ್ಕಾಗಿ ಕ್ರಿಯಾಶೀಲತೆಯಿಂದ ರಂಗಾಯಣ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು ಎಂದು ಹೇಳಿದರು. ರಂಗಾಯಣಕ್ಕೆ ಜಾಗ ಇದ್ದರೆ ಸಾಲದು. ಆದರೆ, ಒಂದು ರಂಗಮಂದಿರ ನಿರ್ಮಾಣಕ್ಕೆ ಕನಿಷ್ಠ 15 ಕೋಟಿ ರೂ.ಬೇಕು. ಹಣಕಾಸಿನ ತೊಂದರೆಯಿಂದ ಎಷ್ಟೋ ರಂಗಮಂದಿರಗಳು ಅರ್ಧಕ್ಕೆ ನಿಂತಿವೆ. ವೃತ್ತಿ ರಂಗಾಯಣ ಕಲಾವಿದರ ಪಾಲಿನ ಸಂಚಲನವಾಗಿದ್ದು, ಇದು ಚಲನಶೀಲವಾಗಲಿ. ರಂಗಭೂಮಿಯಿಂದ ಹೆಚ್ಚು ನಾಟಕಗಳು ಬರಲಿ ಎಂದು ತಿಳಿಸಿದರು. ಹಿರಿಯ ರಂಗಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ, ಕೊಂಡಜ್ಜಿ ಗುಡ್ಡಕ್ಕೂ ರಂಗಭೂಮಿಗೂ ಒಂದು ಅವಿನಾಭಾವ ಸಂಬಂಧವಿದೆ. ಹಿಂದೆ ಬಿ.ವಿ. ಕಾರಂತರು ಕೊಂಡಜ್ಜಿ ಗುಡ್ಡಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಒಡಗೂಡಿದ ರಂಗ ಚಟುವಟಿಕೆ ಕೇಂದ್ರ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು. ಇದು ನಮ್ಮ ಕನಸು ಕೂಡ ಆಗಿದೆ ಎಂದು ಹೇಳಿದರು. ರಂಗಭೂಮಿ ಏನೇ ತಾಂತ್ರಿಕವಾಗಿ ಬೆಳೆದಿದ್ದರೂ ಇದರ ತಾಯಿಬೇರು ವೃತ್ತಿ ರಂಗಭೂಮಿ. ಇದರ ವೈಭವ ಮತ್ತೆ ಮರುಕಳಿಸಬೇಕಾದರೆ ಆಧುನಿಕತೆಗೂ ಒಗ್ಗಿಕೊಳ್ಳಬೇಕು. ಮರಾಠಿ ರಂಗಭೂಮಿಯಲ್ಲಿ ವೃತ್ತಿ, ಹವ್ಯಾಸಿ ಹಾಗೂ ಜನಪದ ರಂಗಭೂಮಿಯನ್ನು ಮಿಶ್ರಗೊಳಿಸಲಾಗಿದೆ. ಹಾಗೆಯೇ ಕನ್ನಡದಲ್ಲೂ ಇದು ಆಗಬೇಕು ಎಂದರು. ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ್ ಕಡಕೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾವಣಗೆರೆಯಲ್ಲಿ ನಿರ್ಮಾಣ ಹಂತದ ರಂಗಮಂದಿರದ ಪಿಲ್ಲರ್ ತೆಗೆದುಹಾಕಬೇಕು. ಸ್ಮಾರ್ಟ್ ಸಿಟಿ ಯೋಜನೆಯಡಿ ಶೀಘ್ರ ಕಾಮಗಾರಿ ಪೂರೈಸಿ ರಂಗಚಟುವಟಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು. ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಿ ರಿತ್ತಿ, ಹಿರಿಯ ರಂಗ ನಿರ್ದೇಶಕ ಡಾ.ಪ್ರಕಾಶ್ ಗರುಡ, ಕಾರ್ಯಾಗಾರದ ನಿರ್ದೇಶಕ ರಾಘವ ಕಮ್ಮಾರ ಹಾಗೂ ಇತರರಿಗೆ ಸನ್ಮಾನಿಸಲಾಯಿತು. ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಇದ್ದರು. ವೃತ್ತಿ ರಂಗಭೂಮಿ ರಂಗಾಯಣ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು. ರಂಗ ಸಂಗೀತ ತರಬೇತಿ ಪಡೆದ 18 ಕಲಾವಿದರು ಆಯ್ದ ನಾಟಕಗಳ ನಾಟ್ಯ ಗೀತೆಗಳನ್ನು ಪ್ರಸ್ತುತಪಡಿಸಿದರು.