

ದಾವಣಗೆರೆ : ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜತೆಗೆ ಸಂಗೀತದ ಶಿಕ್ಷಣವನ್ನೂ ಕೊಡಿಸುವ ಮೂಲಕ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಆರೋಹಿ ಸಂಗೀತ ಕಲಾ ಸಂಸ್ಥೆಯ ವಾರ್ಷಿಕೋತ್ಸವ ನಿಮಿತ್ತ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ, ಉದಯ ರಾಗದಿಂದ ಸಂಧ್ಯಾರಾಗ ಸಂಗೀತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶಿಕ್ಷಣದಲ್ಲಿ ಅಂಕಗಳನ್ನು ಪಡೆಯುವುದು ಎಷ್ಟು ಮುಖ್ಯವೋ, ಅವರಿಗೆ ಉತ್ತಮ ಸಂಸ್ಕಾರ ಕೊಡುವುದೂ ಅಷ್ಟೇ ಮಹತ್ವದ್ದಾಗಿದೆ. ಆರೋಹಿ ಸಂಸ್ಥೆಯು ನೂರಾರು ಮಕ್ಕಳಿಗೆ ಸಂಗೀತದ ವಿದ್ಯೆಯನ್ನು ಕಲಿಸುತ್ತಿದೆ. ಸಂಗೀತಕ್ಕೆ ಔಷಧೀಯ ಗುಣವಿದೆ. ಮಾನಸಿಕ ನೋವನ್ನು ಮರೆಸುವ ಶಕ್ತಿಯಿದೆ ಎಂದು ತಿಳಿಸಿದರು. ಕನ್ನಡ ನಾಡಿನ ಸಂಗೀತ ಮತ್ತು ಸಾಹಿತ್ಯಕ್ಕೆ ಹಿರಿಮೆಯಿದೆ. ಪಂಡಿತ ಪಂಚಾಕ್ಷರ ಗವಾಯಿಗಳು ಮತ್ತು ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತದ ರತ್ನಗಳು ಎಂದು ಬಣ್ಣಿಸಿದರು. ಡಿವೈಎಸ್ಪಿ ರುದ್ರೇಶ ಉಜ್ಜನಿಕೊಪ್ಪ ಮಾತನಾಡಿ, ಸಂಗೀತವು ಶ್ರೇಷ್ಠ ಜ್ಞಾನ. ಅದು ಎಲ್ಲರಿಗೂ ಒಲಿಯುವುದಿಲ್ಲ. ಮಕ್ಕಳಲ್ಲಿ ಸಂಸ್ಕೃತಿ ಬೆಳೆಸಲು ಸಂಗೀತವನ್ನು ಕಲಿಸಬೇಕು ಎಂದು ಸಲಹೆ ನೀಡಿದರು. ಯಾಂತ್ರಿಕ ಬದುಕಿನಲ್ಲಿ ನಮ್ಮ ಮೂಲ ಕಲೆಯನ್ನು ಮರೆಯುತ್ತಿದ್ದೇವೆ. ಮಕ್ಕಳಲ್ಲಿ ಸಂಗೀತದ ಅಭಿರುಚಿ ಬೆಳೆಸಬೇಕು. ಸಂಗೀತಕ್ಕೆ ರೋಗ ಪರಿಹರಿಸುವ ಶಕ್ತಿಯಿದೆ. ಅದು ನಮ್ಮ ಬದುಕಿನಲ್ಲಿ ಒತ್ತಡದಿಂದ ಹೊರ ಬರಲು ನೆರವಾಗುತ್ತದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ ಮಾತನಾಡಿ, ಸಂಗೀತಕ್ಕೆ ದೈವಿಶಕ್ತಿ ಇದೆ. ಅದನ್ನು ಆಸ್ವಾದಿಸುವುದರಿಂದ ಮನಸ್ಸಿಗೆ ಒಳ್ಳೆಯ ಅನುಭವವಾಗುತ್ತದೆ. ಹಾಡು ಹೇಳುವವರು ಎಷ್ಟು ಮುಖ್ಯವೋ, ಕೇಳಿಸಿಕೊಳ್ಳುವವರೂ ಅಷ್ಟೇ ಮುಖ್ಯವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು. ಮಕ್ಕಳಿಗೆ ಸಂಗೀತ ಕಲಿಸುವುದರಿಂದ ಅವರ ಓದಿಗೆ ಸಹಾಯಕವಾಗುತ್ತದೆ. ರಕ್ತದ ಒತ್ತಡವನ್ನು ಅದು ಕಡಿಮೆ ಮಾಡುತ್ತದೆ. ಪಶುಗಳು, ಗಿಡಮರಗಳೂ ಸಂಗೀತ ಆಲಿಸುತ್ತವೆ ಎಂದು ತಿಳಿಸಿದರು. ಹಿಂದುಸ್ತಾನಿ ಗಾಯಕ, ಆರೋಹಿ ಸಂಗೀತ ಕಲಾ ಸಂಸ್ಥೆಯ ಆರ್. ಆನಂದ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಚಿಂತಕ ಬಾ.ಮ. ಬಸವರಾಜಯ್ಯ, ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಸಂಪನ್ನ ಮುತಾಲಿಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಂಗೀತ ಅಧ್ಯಾಪಕ ವೆಂಕಟೇಶ ಆಲ್ಕೋಡ್, ಭೀಮಾಶಂಕರ್, ಜಾಲಿಮರದ ಕರಿಬಸಪ್ಪ, ಡಿ.ಆರ್. ನಟರಾಜ್ ಹಿರೇಮಳಲಿ ಭಾಗವಹಿಸಿದ್ದರು. ಇದೇ ವೇಳೆ ತೋಟಪ್ಪ ಉತ್ತಂಗಿ, ರಾಮಲಿಂಗ ಜಿಲ್ಲಾಪುರ, ಶಿವಬಸಯ್ಯ ಸಾಮೀಜಿ, ಚನ್ನವೀರಯ್ಯ ಸ್ವಾಮೀಜಿ, ಅಮರಯ್ಯ ಸ್ವಾಮೀಜಿ, ಅಕ್ಕಮ್ಮ ಹಿರೇಮಠ ಅವರಿಗೆ ಪುರಸ್ಕರಿಸಲಾಯಿತು.