

ದಾವಣಗೆರೆ : ರಂಗಭೂಮಿ ಕಲೆ ಎನ್ನುವುದು ಜಗತ್ತಿನ ಮೊದಲ ವಿಶ್ವವಿದ್ಯಾನಿಲಯ. ಇದು ಎಲ್ಲರಿಗೂ ಜ್ಞಾನದ ಬೆಳಕನ್ನು ನೀಡುತ್ತದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ವೃತ್ತಿ ರಂಗಭೂಮಿ ರಂಗಾಯಣದಿಂದ ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ರಂಗ ಸಂಗೀತ’ ರಂಗ ಗೀತೆಗಳ ಕಲಿಕಾ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಪ್ರತಿಯೊಬ್ಬರಿಗೂ ಜ್ಞಾನದ ಬೆಳಕು ಬೇಕು. ರಂಗಭೂಮಿ ಮನರಂಜನೆಯ ಜತೆಗೆ ಬದುಕಿಗೆ ಬೇಕಾದ ಜೀವನ ಶಿಕ್ಷಣ ನೀಡುತ್ತದೆ. ಒಳ್ಳೆಯತನ ಬಿತ್ತುವ ಕೆಲಸ ಮಾಡುತ್ತದೆ. ಇದರಿಂದ ಜನತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು. ಇಂದು ಶಿಕ್ಷಣ ಎಲ್ಲರಿಗೂ ಸಿಗುತ್ತಿದೆ. ಆದರೆ, ಶಿಕ್ಷಣ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿದ್ದ ಕಾಲದಲ್ಲಿ ಬಸವಣ್ಣನವರು ಸರ್ವರಿಗೂ ಶಿಕ್ಷಣ ನೀಡಿದರು. ಬಸವಣ್ಣನವರ ನಂತರ ಕತ್ತಲೆ ಆವರಿಸಿದ ಸಂದರ್ಭದಲ್ಲಿ ರಂಗಭೂಮಿ ಎಲ್ಲರಿಗೂ ಶಿಕ್ಷಣ ನೀಡುವ ಕಾರ್ಯ ಮಾಡಿದೆ ಎಂದರು. ಸಮಾಜದಲ್ಲಿ ಬಹಳಷ್ಟು ಯುವ ಪ್ರತಿಭೆಗಳು ಎಲೆಮರೆಯ ಕಾಯಿಯಂತಿದ್ದಾರೆ. ಉತ್ತಮ ವೇದಿಕೆ ಸಿಗುತ್ತಿಲ್ಲ. ರಂಗಭೂಮಿ ಉಳಿಸಿ ಬೆಳೆಸುವ ಜತೆಗೆ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ರಂಗಾಯಣ ಮಾಡಲಿ ಎಂದು ಆಶಿಸಿದರು. ಹಿರಿಯ ರಂಗ ಕಲಾವಿದೆ ನಾಗರತ್ನಮ್ಮ ಸೋಗಿ ರಂಗಗೀತೆ ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಜನರನ್ನು ರಂಗಭೂಮಿಯತ್ತ ಸೆಳೆದು ರಂಗ ತರಬೇತಿ ನೀಡಬೇಕು. ರಂಗಗೀತೆ ಕಲಿಸುವ ಮೂಲಕ ವೃತ್ತಿ ರಂಗಭೂಮಿ ಬೆಳೆಸುವ ಜತೆಗೆ ಶ್ರೀಮಂತಗೊಳಿಸಬೇಕು ಎಂದು ಹೇಳಿದರು. ಕಲಾವಿದ ಆರ್.ಟಿ.ಅರುಣ್‌ಕುಮಾರ್ ಮಾತನಾಡಿ, ಜನರನ್ನು ತಲುಪುವ ಏಕೈಕ ಮಾಧ್ಯಮ ರಂಗಭೂಮಿ. ಇದು ಜೀವನ ಮೌಲ್ಯಗಳ ಜತೆಗೆ ಶಿಸ್ತು ಕಲಿಸುತ್ತದೆ. ವೃತ್ತಿ ರಂಗಭೂಮಿ ನಾಟಕ ವೀಕ್ಷಣೆ ಮಹಾತ್ಮ ಗಾಂಧೀಜಿಯವರ ಮನಪರಿವರ್ತನೆಗೆ ಕಾರಣವಾಗಿತ್ತು. ಇದನ್ನು ಯಾರೂ ಸಹ ನಿರ್ಲಕ್ಷಿಸಬಾರದು ಎಂದರು. ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕ ಮಾತನಾಡಿ, ರಾಜ್ಯದಲ್ಲಿ ಪ್ರತಿವರ್ಷ ಅಂದಾಜು 18 ಸಾವಿರ ವೃತ್ತಿ ರಂಗಭೂಮಿ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಗ್ರಾಮೀಣ ಜನರು ನಾಟಕಗಳ ಪ್ರದರ್ಶನಕ್ಕಾಗಿ ವಾರ್ಷಿಕ 100 ಕೋಟಿ ಹಣ ವ್ಯಯಿಸುತ್ತಿದ್ದಾರೆ ಎಂದು ತಿಳಿಸಿದರು. ಗಾಯಕ ಆನಂದ್ ಆರ್. ಪಾಟೀಲ ಮಾತನಾಡಿ, ನಾಡಿನ ಸಂಗೀತ ಕ್ಷೇತ್ರಕ್ಕೆ ಪಂಡಿತ ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ಕೊಡುಗೆ ಅನನ್ಯ. ಅವರಿಂದಾಗಿ ಅರಮನೆಯಲ್ಲಿದ್ದ ಸಂಗೀತ ಗುರುಮನೆಗೆ ಬಂದಿದ್ದು, ಅಂಧ ಹಾಗೂ ಅನಾಥರಿಗೆ ಸಂಗೀತ ಒಲಿಯುವಂತಾಗಿದೆ ಎಂದು ಸ್ಮರಿಸಿಸಿದರು. ಕಾರ್ಯಾಗಾರದ ನಿರ್ದೇಶಕ ರಾಘವ ಕಮ್ಮಾರ ಇದ್ದರು. ರಂಗಕರ್ಮಿ ಸಿದ್ದರಾಜು ನಿರೂಪಿಸಿದರು. ಬಸವರಾಜ ಐರಣಿ ವಂದಿಸಿದರು.