ಬಡತನ ರೇಖೆಯಿಂದ ಹೊರಬಂದ 13 ಕೋಟಿ ಜನ

vikasita.jpg
Published on

ದಾವಣಗೆರೆ : ಕೇಂದ್ರ ಸರ್ಕಾರ ಜಾರಿಗೆ ತಂದ ಹಲವಾರು ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ. ದೇಶದ 13 ಕೋಟಿಗೂ ಅಧಿಕ ಜನರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
 ನಗರದ ನಿಟುವಳ್ಳಿಯಲ್ಲಿ ಬುಧವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ಕಲ್ಯಾಣಕ್ಕಾಗಿ ಗ್ರಾಮೀಣ, ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ವಿಶ್ವಕರ್ಮ, ಜನ್‌ಧನ್, ಮುದ್ರಾ, ಆಯುಷ್ಮಾನ್ ಸೇರಿ 70ಕ್ಕೂ ಹೆಚ್ಚು ಯೋಜನೆ ಜಾರಿಗೊಳಿಸಲಾಗಿದೆ. ಎಲ್ಲ ಯೋಜನೆಗಳ ಸದುಪಯೋಗ ಪಡೆದು ಅರ್ಥಿಕ ಸಬಲರಾಗಬೇಕು ಎಂದರು.
 ನಗರ ಪ್ರದೇಶದ ನಿವಾಸಿಗಳು ಪ್ರಧಾನ ಮಂತ್ರಿ ನಗರ ವಸತಿ ಯೋಜನೆ, ಸ್ವ-ನಿಧಿ, ಸ್ಟಾಂಡ್ ಆಫ್ ಇಂಡಿಯಾ, ಅಮೃತ್ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಇಲಾಖಾ ಅಧಿಕಾರಿಗಳು ಯೋಜನೆಯಿಂದ ಹೊರಗಿರುವ ಜನರನ್ನು ಯೋಜನಾ ವ್ಯಾಪ್ತಿಗೆ ತರುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
 ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಆದರೆ, ಕೇಂದ್ರ ಸರ್ಕಾರದ ಹಲವು ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯುತ್ತಿವೆ. ಕೇಂದ್ರದ ಯಾವುದೇ ಯೋಜನೆ ಪಡೆಯಲು ಯಾರಿಗೂ ಹಣ ನೀಡುವ ಅವಶ್ಯಕತೆಯಿಲ್ಲ ಎಂದರು.
 ಕೆಲವು ಸೇವಾ ಕೇಂದ್ರಗಳಲ್ಲಿ ಜನರಿಂದ ಹಣ ಪಡೆಯುತ್ತಿರುವ ವಿಷಯ ಕೇಳಿ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರು.
 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಗೆದ್ದು ಪ್ರಧಾನಿಯಾದರೆ ಈ ದೇಶದ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದರು. ಉಜ್ವಲ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು.
 ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್, ಕೆ.ಎಂ. ವೀರೇಶ್, ಎಸ್.ಟಿ. ವೀರೇಶ್, ಪ್ರಸನ್ನಕುಮಾರ್, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net