ಇಎಸ್‌ಐ ಅರ್ಹತಾ ಮಿತಿ ಪರಿಷ್ಕರಣೆಗೆ ಒತ್ತಾಯ

dvg-prabha-mallikarjun_20250730235043013.jpg
Published on

ದಾವಣಗೆರೆ  : ಇಎಸ್‌ಐ ವೇತನ ಮಿತಿಯನ್ನು 21 ಸಾವಿರದಿಂದ 30 ಸಾವಿರಕ್ಕೆ ಏರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.  ಸಂಸತ್ ಕಲಾಪದ ಶೂನ್ಯ ವೇಳೆಯಲ್ಲಿ ಬುಧವಾರ ಈ ವಿಷಯ ಪ್ರಸ್ತಾಪಿಸಿದ ಅವರು, ನೌಕರರ ವಿಮಾ (ಇಎಸ್‌ಐ) ಯೋಜನೆಯ ಹಳೆಯದಾದ ವೇತನ ಮಿತಿಯನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.  ಪ್ರಸ್ತುತ ತಿಂಗಳಿಗೆ  21 ಸಾವಿರಕ್ಕಿಂತ ಹೆಚ್ಚು (ಅಂಗವಿಕಲರಿಗೆ 25 ಸಾವಿರ) ವೇತನ ಹೊಂದಿರುವ ಕಾರ್ಮಿಕರು ಇಎಸ್‌ಐ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. 2017ರಿಂದ ಈ ಮಿತಿಯನ್ನು ಪರಿಷ್ಕರಿಸಲಾಗದ ಪರಿಣಾಮ, ಲಕ್ಷಾಂತರ ದುರ್ಬಲ ಕಾರ್ಮಿಕರು ಸಾಮಾಜಿಕ ಭದ್ರತೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.  ಕರ್ನಾಟಕ ಸೇರಿ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ವೈಜ್ಞಾನಿಕ ಕನಿಷ್ಠ ವೇತನ ಪರಿಷ್ಕರಣೆ ನಡೆಸುತ್ತಿವೆ. ಕರ್ನಾಟಕದ ಕರಡು ಅಧಿಸೂಚನೆಯ ಪ್ರಕಾರ ಮಾಸಿಕ ವೇತನ 19 ಸಾವಿರದಿಂದ 34 ಸಾವಿರಕ್ಕೆ ಏರಿಕೆಯ ನಿರೀಕ್ಷೆ ಇದೆ.  ಬೆಂಗಳೂರಿನಂತಹ ನಗರಗಳಲ್ಲಿ 31 ಸಾವಿರ ಸಂಪಾದಿಸುವ ಕಾರ್ಮಿಕರು ಇನ್ನೂ ಆರ್ಥಿಕವಾಗಿ ದುರ್ಬಲರಾಗಿದ್ದರೂ, ಇಎಸ್‌ಐ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಇಎಸ್‌ಐ ವೇತನ ಮಿತಿಯನ್ನು 21 ಸಾವಿರದಿಂದ 30 ಸಾವಿರಕ್ಕೆ ಏರಿಕೆ ಮಾಡಬೇಕು. ಇಎಸ್‌ಐ ಕಾಯ್ದೆ 1948ಕ್ಕೆ ತಿದ್ದುಪಡಿ ಮಾಡಿ, ದರ ಏರಿಕೆ ಅಥವಾ ವೇತನ ಸೂಚ್ಯಂಕ ಆಧಾರಿತ ನಿಯಮಿತ ಪರಿಷ್ಕರಣೆ ವ್ಯವಸ್ಥೆ ಜಾರಿ ಮಾಡಬೇಕು ಎಂದರು.  ಕನಿಷ್ಠ ವೇತನ ಏರಿಕೆಯ ಕಾರಣದಿಂದ ಸಾಮಾಜಿಕ ರಕ್ಷಣೆಯಿಂದ ಹೊರಗುಳಿಯುವ ಕಾರ್ಮಿಕರಿಗೆ ಹಾಲಿ ಸೌಲಭ್ಯ ಮುಂದುವರಿಯುವಂತೆ ಕ್ರಮ ವಹಿಸಬೇಕು. 51ನೇ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಬೇಕು. ರಾಜ್ಯಗಳು ಮತ್ತು ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಫಲಾನುಭವಿಗಳ ಹಿತಾಸಕ್ತಿ ಕಾಪಾಡಬೇಕೆಂದು ಒತ್ತಾಯಿಸಿದರು.  ಕೇಂದ್ರ ಸರ್ಕಾರವು ತ್ವರಿತ ಕ್ರಮ ಕೈಗೊಂಡು, ವೇತನ ಏರಿಕೆ ಹಾಗೂ ಹಣದುಬ್ಬರದ ಬೆಳವಣಿಗೆ ಹಿನ್ನೆಲೆಯಲ್ಲಿ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net