ಕರ್ನಾಟಕದಲ್ಲಿ ಅಡಕೆ ಮಂಡಳಿ ಸ್ಥಾಪಿಸಿ

dvg-Prabha-mallikarjun_20250312232603433.jpg
Published on

ದಾವಣಗೆರೆ  : ಅಡಕೆ ಬೆಳೆಗಾರರ ದೀರ್ಘಕಾಲಿಕ ಹಿತಕ್ಕಾಗಿ ಬೆಲೆ ಸ್ಥಿರತೆ, ಸಂಶೋಧನೆ, ವಿಸ್ತರಣೆ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಬಿಹಾರದ ಮಖಾನಾ ಮಂಡಳಿ ಮಾದರಿಯಲ್ಲಿ ‘ಅಡಕೆ ಮಂಡಳಿ’ ಸ್ಥಾಪಿಸಬೇಕು ಎಂದು ಸಂಸತ್ತಿನ ಅಧಿವೇಶನದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.  ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿ, ರಾಜ್ಯವು ಅಡಕೆ ಬೆಳೆಯುತ್ತಿರುವ ಪ್ರಮುಖ ರಾಜ್ಯವಾಗಿದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ. 40ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. ಈ ಬೆಳೆಯನ್ನು ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ವ್ಯಾಪಕವಾಗಿ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.  ಹಿಂದಿನಿಂದಲೂ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಅಡಕೆ ಈಗ ಸಮತಟ್ಟು ಪ್ರದೇಶಗಳಿಗೂ ವಿಸ್ತರಿಸಿದೆ. ಹತ್ತು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಬೆಳೆಯೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಜೀವನ ನಿರ್ವಹಿಸುತ್ತಿವೆ ಎಂದು ವಿವರಿಸಿದರು.  ಆದರೆ ಇತ್ತೀಚಿನ ದಿನಗಳಲ್ಲಿ ಅಡಕೆ ಬೆಳೆಗಾರರು ಹಲವಾರು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಬೇರು ಕೊಳೆ ರೋಗ, ಹಳದಿ ಎಲೆ ಚುಕ್ಕಿ ಇತ್ಯಾದಿ ರೋಗಗಳಿಗೆ ಬೆಳೆಯು ತುತ್ತಾಗುತ್ತಿದೆ. ಇದು ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಿದೇಶಗಳಿಂದ ಅಕ್ರಮವಾಗಿ ಅಡಕೆ ಆಮದು ಆಗುತ್ತಿರುವುದರಿಂದ ಬೆಲೆ ಕುಸಿತವಾಗಿದೆ. ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಲೆ ಸ್ಥಿರತೆ ಇಲ್ಲದಿರುವುದು ಹಾಗೂ ನಿಯಂತ್ರಣದ ಕೊರತೆಯಿಂದಾಗಿ ರೈತರು ಮಾರುಕಟ್ಟೆಯ ಅಸ್ಥಿರತೆ ಎದುರಿಸುತ್ತಿದ್ದಾರೆ ಎಂದರು.  ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವಾಲಯ ಅಡಕೆ ಬೆಲೆಗೆ ನಿಯಂತ್ರಣ ಒದಗಿಸಬೇಕು. ಆಮದು ಶುಲ್ಕ ಹೆಚ್ಚಿಸಬೇಕು ಮತ್ತು ಅಕ್ರಮ ಆಮದುಗಳನ್ನು ತಡೆಯಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net