

ದಾವಣಗೆರೆ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅಗೌರವ ಆಗುವ ರೀತಿಯ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ದೇಶದ ಜನರ ಕ್ಷಮೆ ಕೇಳಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಗ್ರಹಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮಿತ್ ಷಾ ಅವರ ಹೇಳಿಕೆಯಿಂದ ಅಂಬೇಡ್ಕರ್ ಅಭಿಮಾನಿಗಳಿಗೆ ನೋವಾಗಿದೆ. ಅಂಬೇಡ್ಕರ್ ಜಪ ಮಾಡುವುದು ಫ್ಯಾಷನ್ ಅಲ್ಲ, ಅದು ನಾವು ಅವರಿಗೆ ನೀಡುವ ಗೌರವ ಎಂದು ತಿಳಿಸಿದರು. ಬಿಜೆಪಿಯ ಕೆಲವು ನಾಯಕರು ಈ ಹಿಂದೆಯೂ ಸಂವಿಧಾನ ಬದಲಾವಣೆಯ ಮಾತುಗಳನ್ನಾಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಾನು ಅಂದುಕೊಂಡಂತೆ 400 ಕ್ಕೂ ಹೆಚ್ಚು ಸ್ಥಾನ ಗಳಿಸಿದ್ದರೆ ದೇಶದ ಸಂವಿಧಾನವೇ ಉಳಿಯುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಸಂಸತ್ತಿನ ಈ ಬಾರಿಯ ಅಧಿವೇಶನದಲ್ಲಿ ಉದ್ಯಮಿ ಅದಾನಿ ಅವರ ಬಗ್ಗೆ ಚರ್ಚಿಸಲು ಆಡಳಿತ ಪಕ್ಷ ಅವಕಾಶ ನೀಡಲಿಲ್ಲ. ಸಂಸತ್ತಿನ ಹೊರಗೆ ನಾವು ಶಿಸ್ತುಬದ್ಧವಾಗಿ ಪ್ರತಿಭಟನೆ ಮಾಡಿದೆವು. ಆದರೆ ಬಿಜೆಪಿಯವರು ಶಿಸ್ತು ಪಾಲಿಸಲಿಲ್ಲ ಎಂದು ಟೀಕಿಸಿದರು. ಬೆಳಗಾವಿ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಡಿದ ಮಾತುಗಳು ಅವರ ಮನಃಸ್ಥಿತಿಯನ್ನು ತೋರಿಸುತ್ತದೆ. ಮಹಿಳೆಯರ ಬಗ್ಗೆ ಯಾವ ರೀತಿಯ ಶಬ್ದ ಬಳಕೆ ಮಾಡಬೇಕು ಎಂದು ಅವರು ತಿಳಿದಿರಬೇಕು ಎಂದು ಪ್ರತಿಕ್ರಿಯೆ ನೀಡಿದರು. ಮರಿಯಮ್ಮನಹಳ್ಳಿ-ಶಿವಮೊಗ್ಗ ಹೆದ್ದಾರಿ ಅಭಿವೃದ್ಧಿಯ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಈಗಾಗಲೇ ಮನವಿ ಮಾಡಿದ್ದೇವೆ. 20 ಪುಟಗಳ ಸಮಗ್ರ ವರದಿ ಸಿದ್ಧಪಡಿಸುತ್ತಿದ್ದು ಪ್ರಧಾನಿ ಮೋದಿ ಅವರನ್ನೂ ಭೇಟಿ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು. ಹರಿಹರ-ಶಿವಮೊಗ್ಗ ರೈಲು ಮಾರ್ಗ ಅಭಿವೃದ್ಧಿ ವಿಚಾರವಾಗಿ ಕೇಂದ್ರದ ರೈಲ್ವೆ ಖಾತೆಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗುವುದಾಗಿ ಹೇಳಿದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಪಾಲಿಕೆಯ ಮೇಯರ್ ಚಮನ್ ಸಾಬ್, ಕಾಂಗ್ರೆಸ್ ಮುಖಂಡರಾದ ಬಿ.ಎಚ್. ವೀರಭದ್ರಪ್ಪ, ಅನಿತಾಬಾಯಿ, ಎಸ್. ಮಲ್ಲಿಕಾರ್ಜುನ ಇತರರು ಇದ್ದರು. ... (ಬಾಕ್ಸ್) ಜನರ ನಡುವೆ ಚರ್ಚೆಯಾಗಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಭಿವೃದ್ಧಿಯ ಹರಿಕಾರರು. ಅವರು ಮಾಡಿರುವ ಕೆಲಸಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಜನರ ನಡುವೆ ಚರ್ಚೆಯಾಗಲಿ. ಹೀಗೆ ಹೇಳಿದ್ದು ಸಂಸದೆ ಪ್ರಭಾ ಮಲ್ಲಿಕಾರ್ಜುನ್. ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಪತ್ರ ಬರೆದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. ಮಲ್ಲಿಕಾರ್ಜುನ್ ಅವರು ಕೋವಿಡ್ ಸಂದರ್ಭದಲ್ಲಿ ಜನರಿಗೆ ನೆರವಾಗಿದ್ದಾರೆ. ಬಡ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅವರು ಜನಾನುರಾಗಿ ಆಗಿದ್ದಾರೆ. ಇನ್ನೊಬ್ಬರಿಂದ ನಾವು ಕಲಿಯಬೇಕಿಲ್ಲ. ಯಾರೋ ಮಾತನಾಡಿದ್ದಕ್ಕೆ ಉತ್ತರಿಸಬೇಕಿಲ್ಲ ಎಂದರು. ಅಧಿಕಾರಿಗಳ ವರ್ಗಾವಣೆ ಬಗ್ಗೆ ಪ್ರಶ್ನಿಸಿದ್ದಾರೆ, ಇದರಲ್ಲಿ ಅವರ ವೈಯಕ್ತಿಕ ಹಿತಾಸಕ್ತಿ ಇರಬಹುದು ಎಂದು ಪರೋಕ್ಷವಾಗಿ ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರತಿಕ್ರಿಯಿಸಿ, ಶಾಸಕ ಬಸವರಾಜು ಶಿವಗಂಗಾ ಅವರ ಹೇಳಿಕೆಯ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.