ಶಾಶ್ವತ ಕೆಲಸ ಮಾಡಿ ಜನಮಾನಸದಲ್ಲಿ ಉಳಿಯಿರಿ

siddesh_20230813004655414.jpg
Published on

ದಾವಣಗೆರೆ : ಗ್ರಾಮ ಪಂಚಾಯಿತಿಗೆ ನೇರವಾಗಿ ಬರುವ ವಿವಿಧ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಶಾಶ್ವತ ಕೆಲಸ ಮಾಡಿ ಜನಮಾನಸದಲ್ಲಿ ಉಳಿಯಬೇಕು ಎಂದು, ಬೆಳವನೂರು ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.
 ನಗರದಲ್ಲಿ ಶನಿವಾರ ತಮ್ಮ ಜನ ಸಂಪರ್ಕ ಕಚೇರಿಗೆ ಆಗಮಿಸಿದ್ದ ಗ್ರಾ.ಪಂ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ ಬಹಳಷ್ಟು ಅನುದಾನ ಬರುತ್ತವೆ ಎಂದು ತಿಳಿಸಿದರು.
 ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಅನುಭವ ಪಡೆದರೆ ಮುಂದಿನ ರಾಜಕೀಯ ಪ್ರಯಾಣ ಸುಲಭವಾಗುತ್ತದೆ. ಪಿಡಿಒ ಹಾಗೂ ಕಾರ್ಯದರ್ಶಿಗಳ ಮೇಲೆ ಹಲವು ಸದಸ್ಯರು ಆರೋಪ ಮಾಡುತ್ತಾರೆ. ಆದರೆ, ಅವರಿಂದ ಯಾವ ರೀತಿ ಕೆಲಸ ತಗೆದುಕೊಳ್ಳಬೇಕು ಎನ್ನುವ ಬಗ್ಗೆ ನೀವು ಸಿದ್ಧತೆ ಮಾಡಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
 ಜಿಲ್ಲೆಯಲ್ಲಿ ಏಳೆಂಟು ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ಪಿ.ಡಿ.ಒ.ಗಳ ಸಮನ್ವಯತೆಯಿಂದ ಮಾದರಿ ಕಾಮಗಾರಿಗಳು ನಡೆದಿವೆ. ಅದರಂತೆ ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.
 ರಾಜಕಾರಣ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ, ಆದರೆ ಅದರಲ್ಲಿ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ. ಇದನ್ನು ಅದೃಷ್ಟ ಎಂದು ಭಾವಿಸದೆ ಅವಕಾಶ ಎಂದುಕೊಂಡು ಜನರ ಸೇವೆ ಮಾಡಿ ಎಂದು ಹೇಳಿದರು.
 ಚನ್ನಗಿರಿ ತಾಲೂಕು ಬುಳ್ಳಸಾಗರ ಗ್ರಾಮ ಪಂಚಾಯಿತಿಯ ಅಕ್ಕಳಿಕಟ್ಟೆ ಗ್ರಾಮಸ್ಥರು ಗೋಮಾಳವನ್ನು ಗ್ರಾಮಕ್ಕೆ ಅನುಕೂಲವಾಗುವ ಕಾರ್ಯಕ್ಕೆ ಮಾತ್ರ ಬಳಕೆ ಮಾಡಿಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದರು.
 ಮುಗಳಿಹಳ್ಳಿ ಗ್ರಾಮಸ್ಥರು ಊರಿನಲ್ಲಿ ಬಿ.ಎಸ್.ಎನ್.ಎಲ್. ಟವರ್ ಅಳವಡಿಸಿಕೊಡುವಂತೆ ಕೋರಿಕೊಂಡರು. ಜಗಳೂರು ತಾಲೂಕು ಚಿಕ್ಕಬಂಟನಹಳ್ಳಿ ಹಾಗೂ ಹರಿಹರ ತಾಲೂಕು ಎಳೆಹೊಳೆ ಗ್ರಾಮದವರು ದೇವಸ್ಥಾನ ನಿರ್ಮಾಣದ ವಿಷಯವಾಗಿ ಮನವಿ ಸಲ್ಲಿಸಿದಾಗ ಇದನ್ನು ಮುಜರಾಯಿ ಇಲಾಖೆಗೆ ಶಿಫಾರಸು ಮಾಡುವುದಾಗಿ ಸಂಸದರು ಹೇಳಿದರು.
 ಹರಪನಹಳ್ಳಿ ತಾಲೂಕು ನಂದಿಬೇವೂರು, ವಡ್ಡಿನದಾದಾಪುರ ತಾಂಡ, ಗಡಿಗುಡಾಳ ಗ್ರಾಮಸ್ಥರು ವಿವಿಧ ಕೆಲಸಗಳಿಗಾಗಿ ಮನವಿ ಸಲ್ಲಿಸಿದರು.
 ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ತುರ್ಚಘಟ್ಟ ಗ್ರಾಮದ ಕರಿಬಸಪ್ಪ, ಪ್ರಭಣ್ಣ, ಆರನೇಕಲ್ ವಿಜಯ್‌ಕುಮಾರ್ ಸೇರಿ ಅನೇಕರು ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net