ದೇಶದ ಜನರಿಗೆ ಸುರಕ್ಷತೆಯ ಗ್ಯಾರಂಟಿ

DVG-MODI-2.jpg
Published on

ದಾವಣಗೆರೆ : ಮಧ್ಯ ಕರ್ನಾಟಕದ ದಾವಣಗೆರೆಗೆ 5ನೇ ಬಾರಿ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರಿಗೆ ಸುರಕ್ಷತೆಯ ಗ್ಯಾರಂಟಿ ಭರವಸೆ ನೀಡಿದರು.
 ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ದಾವಣಗೆರೆ ಮತ್ತು ಹಾವೇರಿ ಕ್ಷೇತ್ರಗಳ ವ್ಯಾಪ್ತಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
 ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನಡೆದ ನೇಹಾ ಹತ್ಯೆ, ಕೆಫೆ ಬಾಂಬ್ ಸ್ಫೋಟ ಪ್ರಕರಣಗಳನ್ನು ಪ್ರಸ್ತಾಪಿಸಿ, ಜನರ ಸುರಕ್ಷತೆಯೆ ನನ್ನ ಆದ್ಯತೆ ಎಂದರು.
 ಏ. 26ರಂದು ನಡೆದ ಮತದಾನದ ನಂತರ ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ. ರಾಜ್ಯದ ಮಹಿಳೆಯರು, ಮೊದಲ ಬಾರಿಗೆ ಮತ ಚಲಾಯಿಸಿದವರನ್ನು ಗಮನಿಸಿದ ನಂತರ ಆ ಪಕ್ಷದ ನಾಯಕರು ಚಿಂತಾಕ್ರಾಂತರಾಗಿದ್ದಾರೆ. ಮೇ 7 ರಂದು ನಡೆಯುವ ಮತದಾನದಲ್ಲಿ ಕನಿಷ್ಠ ಪಕ್ಷ ಖಾತೆ ತೆರೆಯುವ ಮಟ್ಟಕ್ಕಾದರೂ ನಮ್ಮ ಸ್ಥಿತಿ ಸುಧಾರಣೆಯಾಗಲಿ ಎಂಬ ಪ್ರಯತ್ನದಲ್ಲಿದ್ದಾರೆ. ದೆಹಲಿಯಲ್ಲಂತೂ ಕಾಂಗ್ರೆಸ್‌ಗೆ ಖಾತೆ ತೆರೆಯುವ ಸಾಧ್ಯತೆ ಇಲ್ಲ ಎಂದು ಕಾಲೆಳೆದರು.
 ಕಾಂಗ್ರೆಸ್‌ನ ಮಿತ್ರ ಪಕ್ಷಗಳ ನಡುವಿನ ಒಳಜಗಳ ಬೀದಿಗೆ ಬರಲಿದೆ ಎಂದು ಭವಿಷ್ಯ ನುಡಿದರು. ಈ ಹಿಂದೆ ಚುನಾವಣೆಯಲ್ಲಿ ಸೋತಾಗಲೆಲ್ಲ ಪ್ರತಿಪಕ್ಷದವರು ಇವಿಎಂನ ನೆಪ ಹೇಳುತ್ತಿದ್ದರು. ಸುಪ್ರೀಂ ಕೋರ್ಟ್ ತಪರಾಕಿ ಕೊಟ್ಟ ನಂತರ ಈಗ ಅವರು ಸೋಲಿಗೆ ಯಾರನ್ನು ಹೊಣೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
 ದೆಹಲಿಯಿಂದ 1 ರೂ. ಕಳಿಸಿದರೆ 15 ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂದು ಕಾಂಗ್ರೆಸ್‌ನ ಮಾಜಿ ಪ್ರಧಾನಿ ಹೇಳಿದ್ದರು. ಆಗ ಹಣ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಈಗ ಆಧಾರ್, ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡಿದ್ದೇವೆ. ನಕಲಿ ಹೆಸರುಗಳನ್ನು ಸೃಷ್ಟಿಸಿ ಮಾಡಲಾಗುತ್ತಿದ್ದ ಹಣದ ಲೂಟಿಯನ್ನು ತಡೆದಿದ್ದೇವೆ ಎಂದು ಭ್ರಷ್ಟಾಚಾರ ರಹಿತ ಆಡಳಿತದ ವಿವರಣೆ ನೀಡಿದರು.
 ಕರ್ನಾಟಕದಲ್ಲಿ ಕಾನೂನು, ಸುವ್ಯವಸ್ಥೆ ಗಂಭೀರ ಸ್ಥಿತಿಗೆ ತಲುಪಿದೆ. ರಾಜ್ಯದ ನಾಗರಿಕರು ಅಸುರಕ್ಷಿತ ವಾತಾವರಣದಲ್ಲಿದ್ದಾರೆ. ಕೆಫೆಯಲ್ಲಿ ಬಾಂಬ್ ಸ್ಫೋಟವಾದರೆ ಕಾಂಗ್ರೆಸ್ ನಾಯಕರು ಗ್ಯಾಸ್ ಸಿಲಿಂಡರ್ ದುರಂತ ಎಂದು ಲಘುವಾಗಿ ಪರಿಗಣಿಸುತ್ತಾರೆ. ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಸಾಮಾನ್ಯ ಘಟನೆ ಅಲ್ಲ. ಸರ್ಕಾರ ನಡೆಸುತ್ತಿರುವವರು ಮತ ಬ್ಯಾಂಕ್ ಚಿಂತೆಯಲ್ಲಿದ್ದಾರೆ. ನಿಷೇಧಿತ ಪಿಎಫ್‌ಐ ಜತೆ ಕಾಂಗ್ರೆಸ್ ಪಕ್ಷ ಒಪ್ಪಂದ ಮಾಡಿಕೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
 ಜೂನ್ 4ರಂದು ಚುನಾವಣೆಯ ಫಲಿತಾಂಶ ಪ್ರಕಟವಾದಾಗ ವಿಜಯೋತ್ಸವ ಆಚರಿಸಬೇಕು. ಅದರಲ್ಲೂ ದಾವಣಗೆರೆಯ ಮಂದಿ ಸ್ಪೆಷಲ್ ಬೆಣ್ಣೆದೋಸೆ ಸವಿಯುವ ಮೂಲಕ ಸಂಭ್ರಮಿಸಬೇಕು. ಈಗಿನಿಂದಲೆ ತಯಾರಿ ಆರಂಭಿಸಿ ಎನ್ನುವ ಮೂಲಕ ಸ್ಥಳೀಯ ಖಾದ್ಯದ ಸೊಗಡಿನ ಬಗ್ಗೆ ಪ್ರಸ್ತಾಪಿಸಿದರು.
 ಸಂಸದರಾದ ಜಿ.ಎಂ.ಸಿದ್ದೇಶ್ವರ, ಸುಮಲತಾ ಅಂಬರೀಷ್, ಶಿವಕುಮಾರ್ ಉದಾಸಿ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸೇರಿ ಬಿಜೆಪಿಯ ಶಾಸಕರು, ಮಾಜಿ ಸಚಿವರು, ಇನ್ನಿತರ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net