

ದಾವಣಗೆರೆ : ‘ಚಂದ್ರಯಾನ-3’ ಯಶಸ್ವಿಯಾಗಿರುವುದಕ್ಕೆ ವಿಜ್ಞಾನಿಗಳು ಕಾರಣ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅದು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಮಾಜಿ ಸಚಿವೆ ಡಾ.ಬಿ.ಟಿ. ಲಲಿತಾ ನಾಯ್ಕ ಟೀಕಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ, ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಚಂದ್ರಯಾನದ ಯಶಸ್ಸಿಗಾಗಿ ನಮ್ಮ ವಿಜ್ಞಾನಿಗಳಿಗೆ ವಂದಿಸಬೇಕು. ಆ ಯೋಜನೆಗೆ ಜನರ ಹಣ ಬಳಕೆಯಾಗಿದೆ. ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದೇವೆ. ಮೋದಿ ಅವರು ಪ್ರಧಾನಿಯಾಗಿದ್ದಾಗ ಈ ಸಾಧನೆ ಆಗಿದೆ ಎನ್ನುವ ಹೆಮ್ಮೆ ಸಹಜ. ಆದರೆ ಚಂದ್ರನ ನಡುವೆ ಇವರ ಮುಖ ತೋರಿಸಿ, ಭಾಷಣ ಮಾಡಿ ಅವರದೇ ಸಾಧನೆ ಎನ್ನುವ ರೀತಿಯಲ್ಲಿ ಬಿಂಬಿತವಾಗಿದ್ದು ಸರಿಯಲ್ಲ ಎಂದರು.
ತನ್ನನ್ನು ತಾನು ಹೊಗಳಿಕೊಳ್ಳುವ, ಸುಳ್ಳು ಹೇಳುವ ಪ್ರಧಾನಿ ಅಥವಾ ಯಾವುದೇ ರಾಜಕಾರಣಿಯನ್ನು ದೂರ ಇಡಬೇಕಿದೆ. ಉತ್ತಮರನ್ನು ತರಬೇಕಿದೆ ಎಂದು ಅಭಿಪ್ರಾಯಪಟ್ಟರು.
ನೂತನ ಸಂಸತ್ ಭವನ ಉದ್ಘಾಟನೆಯ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಿಲ್ಲ. ‘ಅವರು ಕಪ್ಪಗಿದ್ದಾರೆ, ಪತಿ ಇಲ್ಲ, ಬುಡಕಟ್ಟು ಸಮುದಾಯದವರು ಎನ್ನುವ ಕಾರಣಕ್ಕೆ ದೂರ ಇಡಲಾಯಿತು, ಹಾಗೆ ಮಾಡಬಾರದಾಗಿತ್ತು’ ಎಂದು ಹೇಳಿದರು.