

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ ಶೂನ್ಯ ತ್ಯಾಜ್ಯದ ಮಾದರಿ ವಾರ್ಡ್ ಅಭಿಯಾನ ವಿಜಯವಾಣಿ ಸುದ್ದಿಜಾಲ ದಾವಣಗೆರೆ ಸಾರ್ವಜನಿಕರು ಕೈಜೋಡಿಸಿದರೆ ದಾವಣಗೆರೆಯನ್ನು ಮಾದರಿ ನಗರವಾಗಿ ಮಾಡಬಹುದು. ಅಂಥ ಬದಲಾವಣೆ ತರಲು ಎಲ್ಲರೂ ಸಹಕರಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಮಹಾನಗರ ಪಾಲಿಕೆ ಹಾಗೂ ಪರಿವರ್ತನಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಎಸ್.ಎಸ್. ಬಡಾವಣೆ ‘ಎ’ ಬ್ಲಾಕ್‌ನ ಆಶಾಕಿರಣ ಟ್ರಸ್ಟ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಸ್ವಚ್ಛ-ಹಸಿರು-ಶೂನ್ಯ ತ್ಯಾಜ್ಯದ ಮಾದರಿ ವಾರ್ಡ್’ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಪಾಲಿಕೆಯ 23ನೇ ವಾರ್ಡ್‌ನ್ನು ಮಾದರಿಯಾಗಿಸುವ ಅಭಿಯಾನಕ್ಕೆ ಚಾಲನೆ ದೊರೆತಿದೆ. ಪರಿವರ್ತನಾ ವೇದಿಕೆಯವರು ಜತೆಯಾಗಿದ್ದಾರೆ. ಇದೇ ರೀತಿ ಎಲ್ಲ ವಾರ್ಡ್‌ಗಳಲ್ಲಿರುವ ಮಹಿಳಾ ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು. ನಗರದಲ್ಲಿ 6 ಲಕ್ಷ ಜನಸಂಖ್ಯೆ, 1.20 ಲಕ್ಷ ಮನೆಗಳಿವೆ. ಸ್ವಚ್ಛ, ಹಸಿರು ನಗರ ಆಗಬೇಕಾದರೆ ನಮ್ಮ ಜವಾಬ್ದಾರಿಯನ್ನು ಅರಿಯಬೇಕು. ನಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ನಾವು ನಮ್ಮ ಬೀದಿ, ನಗರದ ಶುಚಿತ್ವವನ್ನೂ ಕಾಪಾಡಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ಪ್ಲಾಸ್ಟಿಕ್ ಬಳಸುವುದಿಲ್ಲ ಎಂದು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು. ಕೆಲವು ವಾರ್ಡ್‌ಗಳಲ್ಲಿ ಖಾಲಿ ನಿವೇಶನ, ಚರಂಡಿಗಳನ್ನು ಸ್ವಚ್ಛವಾಗಿ ಇಟ್ಟಿರುತ್ತಾರೆ. ಹಸಿ ಮತ್ತು ಒಳ ಕಸ ವಿಂಗಡಣೆಯನ್ನು ಮಾಡುತ್ತಿರಬಹುದು, ಈ ರೀತಿಯ ಪರಿಸರ ಪೂರಕ ಚಟುವಟಿಕೆ ಮಾಡುವವರನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವ, ಪರಿಸರ ದಿನಾಚರಣೆಯಂಥ ಸಂದರ್ಭಗಳಲ್ಲಿ ಅವರನ್ನು ಗೌರವಿಸೋಣ ಎಂದು ಸಲಹೆ ನೀಡಿದರು. ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಈ ಭಾಗದ ನಿವಾಸಿಗಳಿಗೆ 2 ಬಿನ್ ಮತ್ತು ಚೀಲವನ್ನು ನೀಡಲಾಗುವುದು. ಮನೆಯ ಸುತ್ತಮುತ್ತ ಜಾಗ ಇರುವ ಕಡೆ ಗಿಡಗಳನ್ನು ನೆಡಲಾಗುವುದು. ಇಲ್ಲಿನ ಯಶಸ್ಸಿನ ಆಧಾರದ ಮೇಲೆ ಇತರ ವಾರ್ಡ್‌ಗಳಿಗೂ ಈ ಅಭಿಯಾನ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಇಲಾಖೆ ಅಧಿಕಾರಿ ಡಾ. ಕೆ.ಕೆ. ಪ್ರಕಾಶ್, ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರಮಣ್ ಲಾಲ್ ಇದ್ದರು. ಡಾ. ಗಾಯತ್ರಿ ಪ್ರಾರ್ಥಿಸಿದರು. ...
...
ಪ್ಲಾಸ್ಟಿಕ್‌ಮುಕ್ತ ಅಭಿಯಾನ
ಶಾಲಾ ವಿದ್ಯಾರ್ಥಿಗಳು, ಪಾಲಕರನ್ನು ಒಳಗೊಂಡು, ‘ಪ್ಲಾಸ್ಟಿಕ್‌ಮುಕ್ತ ಪರಿಸರ ನಿರ್ಮಿಸುವ ಅಭಿಯಾನ’ವನ್ನು ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು. ವಿನೋದ್ ಬೋಧನಕರ್ ಎಂಬುವವರು ಮಹಾರಾಷ್ಟ್ರದಲ್ಲಿ ಈ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಮನೆಗಳಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ವಸ್ತುಗಳನ್ನು ಒಂದು ಕಡೆ ತೆಗೆದಿಟ್ಟು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಅದನ್ನು ತೆಗೆದುಕೊಂಡು ಹೋಗಿ ಶಾಲೆಗೆ ತಲುಪಿಸಬೇಕು ಎಂದು ಮನವಿ ಮಾಡಿದರು. ಶಾಲೆಗೆ ಬರುವ ಪ್ಲಾಸ್ಟಿಕ್‌ನ್ನು ಮರುಬಳಕೆ ಮಾಡಿಸಿ, ಅದರಿಂದ ಬರುವ ಹಣವನ್ನು ಶಾಲೆಗಳಿಗೆ ಸಮನಾಗಿ ಹಂಚಲಾಗುವುದು ಎಂದು ತಿಳಿಸಿದರು. ನಗರದಲ್ಲಿ 350 ಪೌರ ಕಾರ್ಮಿಕರಿದ್ದಾರೆ. 6 ಲಕ್ಷ ಜನಸಂಖ್ಯೆಯ ನಗರವನ್ನು ಅವರಷ್ಟೇ ಸ್ವಚ್ಛಗೊಳಿಸಬೇಕು ಎಂದು ಭಾವಿಸುವುದು ಸರಿಯಲ್ಲ. ಸಾರ್ವಜನಿಕರು ಕೈಜೋಡಿಸದಿದ್ದರೆ ಬದಲಾವಣೆ ತರಲು ಸಾಧ್ಯವಿಲ್ಲ. ನಿಮ್ಮೊಂದಿಗೆ ನಾನೂ ಕಸ ಗುಡಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.