ಸಿಇಐಆರ್ ಪೋರ್ಟಲ್ ಮೂಲಕ 130 ಮೊಬೈಲ್ ಪತ್ತೆ

dvg-police-26.jpg
Published on

ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ 20 ಲಕ್ಷ ರೂ. ಮೌಲ್ಯದ 130 ಮೊಬೈಲ್‌ಗಳನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗುರುವಾರ ವಾರಸುದಾರರಿಗೆ ಹಿಂದಿರುಗಿಸಲಾಯಿತು.
 ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಪೋರ್ಟಲ್ ನಾಗರಿಕ ಸ್ನೇಹಿಯಾಗಿದ್ದು ಮೊಬೈಲ್ ಕಳೆದುಕೊಂಡವರಿಗೆ ನೆರವಾಗುತ್ತದೆ. ಕಳವಾದ, ಸುಲಿಗೆಯಾದ ಅಥವಾ ಕಾಣೆಯಾದ ಮೊಬೈಲ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರದ ದೂರಸಂಪರ್ಕ ಇಲಾಖೆಯಿಂದ ಜಾರಿಗೆ ತಂದಿರುವ ನೂತನ ವ್ಯವಸ್ಥೆ ಇದಾಗಿದೆ.
 ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಈ ಪೋರ್ಟಲ್‌ನಲ್ಲಿ ಮಾಹಿತಿಯನ್ನು ನೋಂದಾಯಿಸಿ ಮೊಬೈಲ್ ಬ್ಲಾಕ್ ಮಾಡಿದ್ದು, ನಂತರ ಪೊಲೀಸರು ಪೋರ್ಟಲ್ ನೆರವಿನಿಂದ ಆ ಮೊಬೈಲ್‌ಗಳನ್ನು ಪತ್ತೆಹಚ್ಚಿದ್ದಾರೆ. ಅವುಗಳಲ್ಲಿ ಕೆಲವು ಕೇರಳ ಇನ್ನಿತರ ಕಡೆಗಳಲ್ಲಿ ದೊರೆತಿವೆ.
 ಜಿಲ್ಲೆಯಲ್ಲಿ ನೂತನ ಪೋರ್ಟಲ್ ಮೂಲಕ ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ 3290 ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದ್ದು, ಅವುಗಳಲ್ಲಿ 520 ಪತ್ತೆ ಮಾಡಿದ್ದಾರೆ. 390 ಮೊಬೈಲ್‌ಗಳನ್ನು ಈಗಾಗಲೇ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸುದ್ದಿಗಾರರಿಗೆ ತಿಳಿಸಿದರು.
 ಈ ಪೋರ್ಟಲ್ ಮೂಲಕ ರಾಜ್ಯದಲ್ಲಿ 1.52 ಲಕ್ಷ ಮೊಬೈಲ್‌ಗಳನ್ನು ಬ್ಲಾಕ್ ಮಾಡಿ 40 ಸಾವಿರ ಪತ್ತೆಹಚ್ಚಲಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಕಳವು, ಸುಲಿಗೆ ಅಥವಾ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ ಸಿಇಐಆರ್ ವೆಬ್ ಪೋರ್ಟಲ್‌ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. ಈ ವ್ಯವಸ್ಥೆಯ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.
 ಪತ್ತೆಯಾದ ತಮ್ಮ ಮೊಬೈಲ್ ಫೋನ್‌ಗಳನ್ನು ವಾಪಸ್ ಪಡೆದವರಲ್ಲಿ ಕೆಲವರು ತಮ್ಮ ಅನಿಸಿಕೆ ಹಂಚಿಕೊಂಡರು. ತಮ್ಮ ಮೊಬೈಲ್ ಪತ್ತೆಗೆ ಪೋರ್ಟಲ್ ಹೇಗೆ ನೆರವಾಯಿತು ಎಂಬುದನ್ನು ವಿವರಿಸಿದರು.
 ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ್, ಸಿಇಎನ್ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಪ್ರಸಾದ್, ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಇನ್‌ಸ್ಪೆಕ್ಟರ್ ರುದ್ರಪ್ಪ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net