ಸಂಗಮೇಶ್ವರ್ ಇದೇ ಜನ್ಮದಲ್ಲೇ ಮತಾಂತರಗೊಳ್ಳಲಿ

IMG-20250910-WA0033.jpg
Published on

ದಾವಣಗೆರೆ  : ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಇದೇ ಜನ್ಮದಲ್ಲೇ ಮುಸಲ್ಮಾನರ ಧರ್ಮಕ್ಕೆ ಮತಾಂತರಗೊಳ್ಳಲಿ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಸಲಹೆ ನೀಡಿದರು.  ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಸಂಗಮೇಶ್ವರ್ ‘ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಜನಿಸುವ ಆಸೆಯಿದೆ’ ಎಂದು ಹೇಳಿಕೆ ನೀಡಿರುವುದರಿಂದ ನಮಗೆಲ್ಲ ಅವಮಾನವಾಗಿದೆ ಎಂದರು.  ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಕಾಂಗ್ರೆಸ್ ನಾಯಕರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಹಿಂದುಗಳ ಭಾವನೆಗೆ ಧಕ್ಕೆ ತರುವವರನ್ನು ರಾಜ್ಯ ಸರ್ಕಾರ ರಕ್ಷಿಸುತ್ತಿದೆ. ಡಿಜಿ ಹಳ್ಳಿ-ಕೆಜಿ ಹಳ್ಳಿ ಇನ್ನಿತರ ಪ್ರಕರಣಗಳಲ್ಲಿ ಆರೋಪಿತರಾಗಿ ಸರ್ಕಾರ ಅವರನ್ನು ಖುಲಾಸೆಗೊಳಿಸಿದ ಪರಿಣಾಮವಾಗಿ ಅಂಥವರಿಂದಲೇ ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಆಗುತ್ತಿದೆ ಎಂದು ದೂರಿದರು.  ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನ ಜೀನ್ಸ್ ಬಂದಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ತಪ್ಪು ಹೆಜ್ಜೆ ಇಟ್ಟಿತು. ಅದು ಎಲ್ಲಿ ಬುಡಕ್ಕೇ ಬರುವುದೋ ಎಂದು ಭಾವಿಸಿ ವಿಷಯಾಂತರ ಮಾಡುತ್ತಿದ್ದಾರೆ. ಚಾಮುಂಡಿ ಬೆಟ್ಟದ ವಿಷಯ, ದಸರಾ ಉದ್ಘಾಟನೆ ವಿವಾದ, ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಗಲಾಟೆ, ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಘಟನೆಗಳು ಮುನ್ನೆಲೆಗೆ ಬಂದಿವೆ ಎಂದು ವಿವರಿಸಿದರು.  ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಾಫ್ಟ್‌ವೇರ್ ಇಂಜಿನಿಯರ್‌ಗಳಂತೆ ‘ವರ್ಕ್ ಫ್ರಾಮ್ ಹೋಮ್’ ಶೈಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.  ಬಿಜೆಪಿಯಿಂದ ಸೆ. 17 ರಿಂದ ಅ. 2ರ ವರೆಗೆ ಸೇವಾ ಪಾಕ್ಷಿಕವನ್ನು ಆಚರಿಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಈ ಅವಧಿಯಲ್ಲಿ ರಕ್ತದಾನ, ಸ್ವಚ್ಛತೆ, ಸಸಿ ನೆಡುವ ಕಾರ್ಯ, ಪ್ರಬುದ್ಧರ ಜತೆಗೆ ವಿಚಾರ ಸಂಕಿರಣ, ಪ್ರದರ್ಶಿನಿ ಏರ್ಪಡಿಸುವುದು ಈ ರೀತಿಯ ಸೇವಾ ಕಾರ್ಯಗಳನ್ನು ಮಾಡಲಿದ್ದಾರೆ ಎಂದು ತಿಳಿಸಿದರು.  ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಬಿ.ಎಂ. ಸತೀಶ್, ಪ್ರಸನ್ನ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net