

ದಾವಣಗೆರೆ : ಜಾತಿ ಜನಗಣತಿ ಹಲವು ಗೊಂದಲದಿಂದ ಕೂಡಿದೆ. ಇದನ್ನು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ ಎಂದು ಚನ್ನಗಿರಿಯ ಕಾಂಗ್ರೆಸ್ ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಜನಗಣತಿ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಳೆದಿರುವ ನಿಲುವಿಗೆ ನಾನೂ ಬದ್ಧನಾಗಿದ್ದೇನೆ. ಸರ್ಕಾರ ವರದಿ ಹೊರ ತರುವುದಕ್ಕೂ ಮುನ್ನ ಚರ್ಚಿಸಬೇಕಿತ್ತು. ವರದಿ ಬಿಡುಗಡೆಗೊಳಿಸಿ ತಿದ್ದುಪಡಿಗೆ ಮುಂದಾದರೆ ಸರ್ಕಾರಕ್ಕೆ ಮುಜುಗರ ಎಂದು ತಿಳಿಸಿದರು. ಸಾದರ ಲಿಂಗಾಯತ ಸಮುದಾಯದ ಜನಸಂಖ್ಯೆ 67 ಸಾವಿರ ಇದೆ ಎಂಬುದಾಗಿ ಸಮೀಕ್ಷೆ ಹೇಳುತ್ತಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರವೊಂದರಲ್ಲೇ ಅಂದಾಜು 60 ಸಾವಿರ ಸಾದರ ಲಿಂಗಾಯತ ಸಮುದಾಯವಿದೆ. ಯಾವ ರೀತಿಯಲ್ಲಿ ಗಣತಿ ಮಾಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದರು. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ 1.25 ಕೋಟಿ ಇದೆ. ಯಾವ ಜಾತಿಯ ಜನರ ಸಂಖ್ಯೆ ಎಷ್ಟಿದೆ ಎಂಬುದನ್ನು ಪಾರದರ್ಶಕವಾಗಿ ನೀಡಿದರೆ ಅನುಕೂಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.