

ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯ ವೈಖರಿಯ ಬಗ್ಗೆ ಚನ್ನಗಿರಿ ಕ್ಷೇತ್ರದ ಆಡಳಿತಾರೂಢ ಕಾಂಗ್ರೆಸ್ ಶಾಸಕ ಬಸವರಾಜು ವಿ. ಶಿವಗಂಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಸವರಾಜು ಶಿವಗಂಗಾ ಪತ್ರ ಬರೆದಿದ್ದಾರೆ. ಸಚಿವ ಮಲ್ಲಿಕಾರ್ಜುನ್ ಬಿಜೆಪಿ ಜತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಇದರಿಂದ ನಿಷ್ಠಾವಂತ ಕಾರ್ಯಕರ್ತರು, ಪಕ್ಷದ ಮುಖಂಡರಿಗೆ ಮುಜುಗರವಾಗುತ್ತಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳ ವರ್ಗಾವಣೆ, ಅಪೆಕ್ಸ್ ಬ್ಯಾಂಕಿಗೆ ನಿರ್ದೇಶಕರ ನೇಮಕ, ಇನ್ನಿತರ ವಿಚಾರಗಳನ್ನು ಶಾಸಕ ಶಿವಗಂಗಾ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಹೊಂದಾಣಿಕೆ ರಾಜಕಾರಣದಿಂದ ಮುಂದಿನ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷಕ್ಕೆ ಮುಜಗರವಾಗಬಹುದು. ಪಕ್ಷದ ಸಂಘಟನೆ, ಮುಖಂಡರು, ಕಾರ್ಯಕರ್ತರ ಹಿತ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸುವಂತೆ ಚನ್ನಗಿರಿ ಶಾಸಕ ಬೇಡಿಕೆ ಇಟ್ಟಿದ್ದಾರೆ. ಸ್ಥಳೀಯ ಶಾಸಕರ ಬಗ್ಗೆ ಗೌರವ, ವಿಶ್ವಾಸ ಇಲ್ಲದಿರುವುದು, ಆಡಳಿತಾತ್ಮಕ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಏಕಪಕ್ಷೀಯ ನಡವಳಿಕೆಯಿಂದ ನೊಂದಿದ್ದೇವೆ ಎಂದು ಪತ್ರದಲ್ಲಿ ಹೇಳಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿ 25 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಕಾಂಗ್ರೆಸ್‌ಗೆ ಹಿನ್ನೆಡೆಯಾಗಿತ್ತು ಎಂದು ಅವರು ನೆನಪಿಸಿದ್ದಾರೆ. ... * ವರ್ಗಾವಣೆಗೆ ಬ್ರೇಕ್ ಶಿವಮೊಗ್ಗದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಪ್ರಥಮ ದರ್ಜೆ ಲೆಕ್ಕ ಸಹಾಯಕರಾಗಿರುವ ಆರ್. ವಿಜಯ ಕುಮಾರ್ ಅವರನ್ನು ಕೌಟುಂಬಿಕ ತೊಂದರೆಗಳ ಕಾರಣದಿಂದ ಇಲಾಖೆಯ ದಾವಣಗೆರೆ ಕಚೇರಿಯಲ್ಲಿ ಪ್ರಥಮ ದರ್ಜೆ ಲೆಕ್ಕ ಸಹಾಯಕರಾಗಿರುವ ಐ.ಎಸ್. ಒಡೇನಪುರ ಅವರ ಸ್ಥಳ ಮತ್ತು ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಇದಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೂ ಶಿಫಾರಸು ಪತ್ರ ನೀಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿತ್ತು. ಚಲನಾದೇಶವನ್ನೂ ಪಡೆಯಲಾಗಿತ್ತು. ಕರ್ತವ್ಯದಿಂದ ಬಿಡುಗಡೆ ಗೊಳಿಸುವ ವೇಳೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತೀವ್ರ ಒತ್ತಡ ಹೇರಿ ಈ ಆದೇಶವನ್ನು ಕಾಯ್ದಿರಿಸಿದ್ದಾರೆ. ಇದು ಸಚಿವರ ಇಬ್ಬಗೆಯ ನೀತಿಯಾಗಿದೆ ಎಂದು ಶಾಸಕ ಶಿವಗಂಗಾ ಹೇಳಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಐ.ಎಸ್. ಒಡೇನಪುರ ಅವರು, ಬಿಜೆಪಿ ಬೆಂಬಲದೊಂದಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸ್ಥಳೀಯ ಶಾಸಕರ ಬೆಂಬಲಿತ ಅಭ್ಯರ್ಥಿ ಸೋಲು ಕಂಡಿದ್ದಾರೆ. ಇದಕ್ಕೆ ಕಾರಣರಾದವರ ಬೆಂಬಲಕ್ಕೆ ಜಿಲ್ಲಾ ಸಚಿವರು ನಿಂತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ... * ಡಿಸಿಸಿ ಬ್ಯಾಂಕ್ ಚುನಾವಣೆ ಈ ಹಿಂದೆ ನಡೆದ ದಾವಣಗೆರೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಚನ್ನಗಿರಿ ತಾಲೂಕಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲಿಸದೇ, ಬಿಜೆಪಿಯ ಮಾಜಿ ಶಾಸಕರ ಬೆಂಬಲಿಗನ ಗೆಲುವಿಗೆ ಪರೋಕ್ಷವಾಗಿ ಕಾರಣರಾಗಿದ್ದರು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ದೂರಿದ್ದಾರೆ. ರಾಜ್ಯ ಅಪೆಕ್ಸ್ ಬ್ಯಾಂಕಿಗೆ ಜಿಲ್ಲೆಯಿಂದ ನಿರ್ದೇಶಕರನ್ನು ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಹೊನ್ನಾಳಿ ಶಾಸಕರ ಪುತ್ರ ಸುರೇಂದ್ರ ಅವರ ಹೆಸರನ್ನು ಪರಿಗಣಿಸದೇ, ಬಿಜೆಪಿ ಬೆಂಬಲಿಗರನ್ನು ಆ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯು ಕಾಂಗ್ರೆಸ್‌ನ ಹಿಡಿತದಲ್ಲಿ ಇದ್ದರೂ ಮುಜುಗರ