ಮಕ್ಕಳಿಗೆ ನೈತಿಕತೆಯ ಪಾಠ ಮಾಡಿದ ಜಗಳೂರು ಶಾಸಕ

JLR-ph-1-Nov-28-Smart-class-udgatane.jpg
Published on

ಜಗಳೂರು :  ತಾವು ಓದಿದ ಪಟ್ಟಣದ ಶಾಲೆಯಲ್ಲಿ ಗುರುವಾರ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ನೆರವೇರಿಸಿದ  ಶಾಸಕ ಬಿ. ದೇವೇಂದ್ರಪ್ಪ, ವಿದ್ಯಾರ್ಥಿಗಳಿಗೆ ನೈತಿಕತೆಯ ಪಾಠ ಮಾಡಿದರು.  ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 14 ಸರ್ಕಾರಿ ಪ್ರೌಢಶಾಲೆ ಹಾಗೂ 32 ಸರ್ಕಾರಿ ಪ್ರಾಥಮಿಕ ಶಾಲೆಗಳ 45 ಕೊಠಡಿಗಳಿಗೆ ಸ್ಮಾರ್ಟ್‌ಕ್ಲಾಸ್ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  ‘ಗುಟ್ಟೊಂದು ಹೇಳುವೆ, ಪುಟಾಣಿ ಮಕ್ಕಳೇ. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಚಲನಚಿತ್ರ ಗೀತೆಯನ್ನು ಹಾಡುವ ಮೂಲಕ ಮೌಲ್ಯಗಳ ಮಾರ್ಗದರ್ಶನ ನೀಡಿದರು.  ವಿದ್ಯೆಯ ಜತೆಗೆ ವಿನಯವೂ ಇರಬೇಕು ಎಂದು ಕಿವಿಮಾತು ಹೇಳಿದ ಅವರು, ಸತ್ಪ್ರಜೆಯಾಗಿ ದೇಶ ಸೇವೆ ಮಾಡಬೇಕು. ಕಾಟಾಚಾರಕ್ಕೆ ಓದದೇ ನಿರಂತರ ಪ್ರಯತ್ನದಿಂದ ಗುರಿ ಸಾಧಿಸಬೇಕು ಎಂದರು.  ಬಡತನವು ನೆಪವಾಗಬಾರದು, ಪ್ರತಿಭೆಯಿಂದ ಎತ್ತರಕ್ಕೆ ಏರಬಹುದು. ಕನಸು ಕಟ್ಟಿಕೊಂಡು ಅದನ್ನು ನನಸಾಗಿಸಿಕೊಳ್ಳಬೇಕು ಎಂದು ತಿಳಿಸಿದರು.  ಸ್ಮಾರ್ಟ್ ಕ್ಲಾಸ್ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣ, ಆಕರ್ಷಕ ಆಧುನಿಕ ಡಿಜಿಟಲ್ ತಂತ್ರಜ್ಞಾನ ಆಧರಿತ ಬೋಧನಾ ವ್ಯವಸ್ಥೆಯಿಂದ ಮಕ್ಕಳ ಜ್ಞಾನ ಹೆಚ್ಚಳ ಸಾಧ್ಯ ಎಂದು ಹೇಳಿದರು.  ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳದಲ್ಲ. ನಾವು ಓದುವಾಗ ತಂತ್ರಜ್ಞಾನವಿರಲಿಲ್ಲ. ಈಗ ಸ್ಮಾರ್ಟ್‌ಕ್ಲಾಸ್ ಯುಗ ಆರಂಭವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಂಗೈನಲ್ಲೇ ಜ್ಞಾನ ಗಂಗೋತ್ರಿಯಂತೆ ಸ್ಮಾರ್ಟ್ ಶಿಕ್ಷಣ ವರದಾನವಾಗಿ ರೂಪುಗೊಂಡಿದೆ  ಎಂದರು.  ಸಂಕಲ್ಪ ಮಾಡಿದಾಗ ಮಾತ್ರ ಐಎಎಸ್, ಐಆರ್‌ಎಸ್‌ನಂತಹ ನಾಗರಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಎತ್ತರಕ್ಕೇರಲು ಸಾಧ್ಯ. ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರದ ಯೋಜನೆಗಳು ಫಲಪ್ರದವಾಗಬೇಕಾದರೆ ವಿದ್ಯಾರ್ಥಿಗಳು ಗುರಿ ಬದಲಾಗದಂತೆ ಹೆಜ್ಜೆಯಿಡಬೇಕು ಎಂದು ತಿಳಿಸಿದರು.  ನಿವೃತ್ತ ಉಪನ್ಯಾಸಕ ಸುಭಾಷ್ ಚಂದ್ರ ಬೋಸ್ ಮಾತನಾಡಿ, ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು. ಅವರನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸದೆ ದೇಶದ ಮಹನೀಯರ ವಿಚಾರವನ್ನು ಪರಿಚಯಿಸಬೇಕು ಎಂದರು.  ಶಿಕ್ಷಕರು ಚೀಟಿ ಇಟ್ಟುಕೊಂಡು ಪಾಠ ಮಾಡಬೇಡಿ. ಓದಿಕೊಂಡು ಬಂದು ಗುಣಾತ್ಮಕ ಬೋಧನೆ ಮಾಡಬೇಕು. ಸ್ಮಾರ್ಟ್ ಕ್ಲಾಸ್ ಅನ್ನು ಎಲ್ಲ್ಲ ಮಕ್ಕಳು ಸದುಪಯೋಗ ಪಡಿಸಿಕೊಂಡು ನಾಡಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.  ಡಿಡಿಪಿಐ ಕೊಟ್ರೇಶ್ ಮಾತಾನಾಡಿದರು. ತಹಸೀಲ್ದಾರ್ ಸೈಯದ್ ಕಲೀಮ್ ಉಲ್ಲಾ, ಇಒ ಕೆಂಚಪ್ಪ, ಪಪಂ ಅಧ್ಯಕ್ಷ ನವೀನ್ ಕುಮಾರ್, ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಪ್ಪೇಸ್ವಾಮಿ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕಾ, ಬಿಇಒ ಹಾಲಸ್ವಾಮಿ, ಪಪಂ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಪಂ ಸಹಾಯಕ ಇಂಜಿನಿಯರ್ ಶಿವಮೂರ್ತಿ, ಪ್ರಾಚಾರ್ಯ ಜಗದೀಶ್, ಡಿಡಿ ಹಾಲಪ್ಪ,  ಪಲ್ಲಾಗಟ್ಟೆ ಶೇಖರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net