ಸಚಿವ ಎಸ್‌ಎಸ್‌ಎಂ ವಿರುದ್ಧ ಪ್ರಕರಣ ದಾಖಲಿಸಲಿ

DVG_BP-HARISH.jpg
Published on

ದಾವಣಗೆರೆ : ಹಿಂದುಗಳಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಹೇಳಿಕೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದರು.  ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅನ್ಯ ಸಮುದಾಯದವರು ಹೆಚ್ಚು ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ  ಫ್ಲೆಕ್ಸೃ್ ಹಾಕಿದರೆ, ಮೆರವಣಿಗೆ ಮಾಡಿದರೆ ಒದ್ದು ಒಳಗೆ ಹಾಕಿಸುತ್ತೇನೆ’ ಎಂದು ಬಹಿರಂಗ ಹೇಳಿಕೆ ನೀಡಿದ ಸಚಿವರ ವಿರುದ್ಧ ಎಸ್ಪಿ ಅವರು ಮೊದಲು ಪ್ರಕರಣ ದಾಖಲಿಸಬೇಕಿತ್ತು. ಆದರೆ ಅವರು ನನ್ನ ವಿರುದ್ಧ ಎಫ್‌ಐಆರ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಜಿಲ್ಲಾ ಸಚಿವರಿಗೆ ಒದ್ದು ಒಳಗೆ ಹಾಕಿಸುವ ಅಧಿಕಾರ ಕೊಟ್ಟವರು ಯಾರು?, ಪೊಲೀಸ್ ಇಲಾಖೆಯನ್ನು ಇವರೇ ಕೈಗೆತ್ತಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು.  ...  (ಬಾಕ್ಸ್)  ಯಾವ ಕೇಸ್‌ಗೂ ಹೆದರುವುದಿಲ್ಲ  ನಾನು ಯಾವ ಎಫ್‌ಐಆರ್‌ಗೂ ಹೆದರುವುದಿಲ್ಲ. ಕಾನೂನಿನ ಬಗ್ಗೆ ಗೌರವವಿದೆ, ನ್ಯಾಯಾಲಯದ ಮೂಲಕ ಉತ್ತರ ಕೊಡುತ್ತೇನೆ ಎಂದು ಶಾಸಕ ಹರೀಶ್ ಪ್ರತಿಕ್ರಿಯಿಸಿದರು.  ಸಚಿವರು ಕಬಳಿಸಿರುವ ಜಮೀನನ್ನು ನಾನು ಹೋರಾಟ ಮಾಡಿ ರೈತರಿಗೆ ಮರಳಿಸುವಂತೆ ಮಾಡುತ್ತೇನೆ ಎಂಬ ಭಯದಿಂದ ಮಹಿಳಾ ಪೊಲೀಸ್ ಅಧಿಕಾರಿಗಳ ಮೂಲಕ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ವರ್ತನೆಯಿಂದಾಗಿಯೇ ಸಚಿವರು ಅಧಿಕಾರಿಗಳನ್ನು ಶ್ವಾನದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದೆ ಎಂದು ಹರೀಶ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.  ಸಚಿವ ಮಲ್ಲಿಕಾರ್ಜುನ್ ಹಣ, ಅಧಿಕಾರದ ಮದದಿಂದ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಚಿವರ ಭೂ ಹಗರಣದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಲಿಖಿತ ದೂರು ನೀಡಿದ್ದೇನೆ. ಮುಖ್ಯ ಕಾರ್ಯದರ್ಶಿ ಈ ಕುರಿತು ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ  ನಿರ್ದೇಶನ ನೀಡಿ ಐದು ತಿಂಗಳಾದರೂ ವರದಿ ಕೊಟ್ಟಿಲ್ಲ. ಜಿಲ್ಲಾಡಳಿತ ವರದಿ ನೀಡದಂತೆ ಸಚಿವರು ನೋಡಿಕೊಂಡಿದ್ದಾರೆ ಎಂದರು.  ಸರ್ಕಾರಿ ಕಟ್ಟಡ ಹಾಗೂ ಸಾರ್ವಜನಿಕ ಆಸ್ತಿಯ ಮೇಲೆ ಹಾಕಿರುವ ಬದುಕಿರುವ ರಾಜಕಾರಣಿಗಳ ಹೆಸರು ತೆಗೆಯುವಂತೆ ಉಚ್ಚ ನ್ಯಾಯಾಲಯ ಆದೇಶ ನೀಡಿದೆ. ಅಧಿಕಾರಿಗಳು ಅವುಗಳನ್ನು ತೆಗೆಯದಂತೆ ಸಚಿವರು ನೋಡಿಕೊಂಡಿದ್ದಾರೆ ಎಂದು ಆರೋಪಿಸಿದರು.  ಜಿಲ್ಲಾಧಿಕಾರಿ, ಎಸ್ಪಿ ಅವರನ್ನು ಪಕ್ಕದಲ್ಲಿ ಕೂಡಿಸಿಕೊಂಡು ರಾಜಕೀಯ ಸುದ್ದಿಗೋಷ್ಠಿ ಮಾಡುವ ಮೂಲಕ ಸಚಿವರು ಜನ ಸಾಮಾನ್ಯರನ್ನು ಬೆದರಿಸುತ್ತಿದ್ದಾರೆ, ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹರೀಶ್ ಹೇಳಿದರು.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net