ಶಾಸಕ ಶಿವಗಂಗಾ ಬಸವರಾಜ ಯೂಟರ್ನ್

DVG_shivaganga_20250724003929924.jpg
Published on

ದಾವಣಗೆರೆ : ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಸಿಎಂ ಅಗುತ್ತಾರೆ. ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಯೂಟರ್ನ್ ಹೊಡೆದಿದ್ದಾರೆ.  ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಐದು ವರ್ಷವೂ ಡಿಸೆಂಬರ್ ಇರುತ್ತದೆ. ಯಾವಾಗಲಾದರೂ ಬದಲಾವಣೆ ಆಗಬಹುದು. ಇದೇ ಡಿಸೆಂಬರ್ ಅಂತ ನಾನು ಹೇಳಿಲ್ಲ, ಐದು ವರ್ಷದಲ್ಲಿ ಯಾವ ಡಿಸೆಂಬರ್‌ನಲ್ಲಾದರೂ ಆಗಬಹುದು ಎಂದರು.  ಪಂಚ ಪೀಠಾಧೀಶರು ಒಂದೇ ವೇದಿಕೆಯಲ್ಲಿ ಸೇರಿದ್ದು ಖುಷಿಯ ವಿಚಾರ. ಸ್ವಾಮೀಜಿಗಳು ಒಗ್ಗಟ್ಟು ಪ್ರದರ್ಶನ ಮಾಡಿದಂತೆ ನಾವೂ ಕೂಡ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಕಿತ್ತಾಟ ಇಲ್ಲ ಎಂದು ಹೇಳಿದರು.  ಕೆಪಿಸಿಸಿ ಅಧ್ಯಕ್ಷರು ಯಾರೇ ಆದರೂ ಸ್ವಾಗತ ಮಾಡುತ್ತೇನೆ. ಸಿಎಂ ಯಾರೇ ಆದರೂ ಕಾಂಗ್ರೆಸ್‌ನವರೇ ತಾನೇ ಎಂದು ಪ್ರಶ್ನಿಸಿದರು. ನಮ್ಮ ಪಕ್ಷದಲ್ಲಿ ಕೊಟ್ಟಷ್ಟು ವಾಕ್ ಸ್ವಾತಂತ್ರ್ಯ ಯಾವ ಪಕ್ಷದಲ್ಲೂ ನೀಡುವುದಿಲ್ಲ. ಬಿಜೆಪಿಯಲ್ಲಿ ಮಾತನಾಡಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿದರು, ರೇಣುಕಾಚಾರ್ಯಗೆ ನೋಟಿಸ್ ನೀಡಿದರು ಎಂದರು.  ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಅನುದಾನ ನೀಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಬೇರೆ ಪಕ್ಷದ ಶಾಸಕರಿಗೂ ನೀಡುತ್ತಾರೆ ಎಂದು ತಿಳಿಸಿದರು.  ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ನನ್ನ ನಡುವೆ ವಾಕ್ಸಮರ ಅಂತ್ಯವಾಗಿದೆ. ಈಗ ಅದೆಲ್ಲ ಮುಗಿದು ಹೋದ ವಿಚಾರ. ನಾನು ಏನೂ ಮಾತನಾಡುತ್ತಿಲ್ಲ, ಅವರೂ ಏನೂ ಹೇಳಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net