ಅವೈಜ್ಞಾನಿಕ ಕೆಳ ಸೇತುವೆ ಸರಿಪಡಿಸಲು ಸೂಚನೆ

dvg-minister-meeting-27.jpg
Published on

ದಾವಣಗೆರೆ : ನಗರದ ಹೊರ ವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅವೈಜ್ಞಾನಿಕ ಕೆಳ ಸೇತುವೆಗಳನ್ನು ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚನೆ ನೀಡಿದರು.
 ನಗರದಲ್ಲಿ ಬುಧವಾರ ಈ ವಿಷಯದ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿ, ನನ್ನ ಅವಧಿಯಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಲು ಅವಕಾಶ ನೀಡುವುದಿಲ್ಲ. ವೈಜ್ಞಾನಿಕವಾಗಿ ಮಾಡಬೇಕು, ಸಾರ್ವಜನಿಕರ ಜೀವಕ್ಕೆ ಬೆಲೆ ಕೊಡಬೇಕು ಎಂದು ಹೇಳಿದರು.
 ಹದಡಿ ರಸ್ತೆಯಲ್ಲಿ ಬರುವ ಕೆಳಸೇತುವೆ ಬಳಿ ಅಪಘಾತಗಳು ಹೆಚ್ಚಾಗುತ್ತಿವೆ. ಅದನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಿದೆ. ಅದಕ್ಕಾಗಿ ಆ ಭಾಗದಲ್ಲಿರುವ ಭದ್ರಾ ನಾಲೆಯನ್ನು ಕವರ್ ಮಾಡಿ ಅಲ್ಲೊಂದು ವೃತ್ತ ಮಾಡಿದರೆ ಜಾಗ ವಿಶಾಲವಾಗುತ್ತದೆ. ಅಪಘಾತಗಳು ಸಂಭವಿಸುವುದನ್ನು ತಡೆಯಬಹುದು ಎಂದು ತಿಳಿಸಿದರು.
 ಶಾಮನೂರು ಬಳಿ ಇರುವ ಕೆಳ ಸೇತುವೆಯ ಮಾದರಿಯಲ್ಲಿ ಹೈಟೆಕ್ ಆಸ್ಪತ್ರೆ ಮುಂಭಾಗ, ಬನಶಂಕರಿ ಬಡಾವಣೆ, ಕುಂದುವಾಡ ಮತ್ತು ಹಳೇಬಾತಿ ಬಳಿಯಲ್ಲೂ ನಿರ್ಮಿಸಬೇಕು. ಮುಂದಿನ 5 ವರ್ಷಗಳಲ್ಲಿ ವಾಹನಗಳ ಸಂಖ್ಯೆ 2 ಪಟ್ಟು ಹೆಚ್ಚಾಗುವುದರಿಂದ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ಈಗಲೇ ಸರಿಪಡಿಸಬೇಕು ಎಂದು ಹೇಳಿದರು.
 ಸರ್ವೀಸ್ ರಸ್ತೆಗಳನ್ನೂ ಬೇಗನೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಏನಾದರೂ ಸಹಕಾರ ಬೇಕಿದ್ದರೆ ಒದಗಿಸಲಾಗುವುದು ಎಂದು ತಿಳಿಸಿದರು. ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಯೋಜನಾ ನಿರ್ದೇಶಕ ಗೌರವ್ ಹೇಳಿದರು.
 ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ದೂಡಾ ಆಯುಕ್ತ ಬಸನಗೌಡ ಕೋಟೂರ, ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net