

ದಾವಣಗೆರೆ : ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಹಂತದಲ್ಲಿ 3 ಬಾರಿ ಪರೀಕ್ಷೆ ಬರೆಯುವ ನೀತಿ ಜಾರಿಗೆ ತಂದಿರುವುದು ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ, ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ(ಕುಪ್ಮಾ) ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪದವಿಪೂರ್ವ ಶಿಕ್ಷಣ ಸಮಾವೇಶದಲ್ಲಿ ಮಾತನಾಡಿದರು. ಮೂರು ಬಾರಿ ಪರೀಕ್ಷೆ ಬರೆಯುವ ನೀತಿ ತಂದಿದ್ದರಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಈ ವರ್ಷ 1.16 ಲಕ್ಷ ಮಕ್ಕಳು ಹಾಗೂ ದ್ವಿತೀಯ ಪಿಯುಸಿಯಲ್ಲಿ 86 ಸಾವಿರ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಗೌರಿಬಿದನೂರಿನ ವಿದ್ಯಾರ್ಥಿಯೊಬ್ಬರು ಗೋರಖಪುರ ಐಐಟಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಖಾಸಗಿ ಸಂಸ್ಥೆಗಳಿಗೆ ಸಮಾನವಾಗಿ ಗುಣಮಟ್ಟ ತರುವ ಪ್ರಯತ್ನ ನಡೆದಿದೆ. ಈ ವರ್ಷ 25 ಸಾವಿರ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಉಚಿತ ತರಬೇತಿಯನ್ನು ಈ ವರ್ಷದಿಂದ ನೀಡಲಾಗುತ್ತಿದೆ ಎಂದು ಹೇಳಿದರು. ರಾಜ್ಯದಲ್ಲಿ 13 ಸಾವಿರ ಸರ್ಕಾರಿ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳಿದ್ದಾರೆ. ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ನಡೆಸುತ್ತೇವೆ. ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ 3500 ಕೋಟಿ ವೆಚ್ಚದಲ್ಲಿ 800 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಆರಂಭಿಸಲಾಗುತ್ತಿದೆ. ಪದವಿಪೂರ್ವ ಕಾಲೇಜುಗಳನ್ನು ಆರಂಭಿಸುವ ಉದ್ದೇಶವೂ ಇದೆ. ಇದರಿಂದ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಸ್ಪರ್ಧೆ ಆರಂಭವಾಗಬಹುದು ಎಂದು ಅಭಿಪ್ರಾಯಪಟ್ಟರು. ಕುಪ್ಮಾ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಕುಪ್ಮಾ ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್, ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್, ಜಿಲ್ಲಾಧ್ಯಕ್ಷ ಎಸ್.ಜೆ. ಶ್ರೀಧರ್ ಇದ್ದರು. ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಜಯಂತ್ ಸ್ವಾಗತಿಸಿದರು. ಇಂಚರಾ ಮೂರ್ತಿ ನಿರೂಪಿಸಿದರು. ದೇವಸೇನಾ ಭರತನಾಟ್ಯ ಪ್ರದರ್ಶಿಸಿದರು. ...