

ದಾವಣಗೆರೆ: ರಾಜ್ಯದಲ್ಲಿ 13 ಸಾವಿರ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಮಂಡಳಿಯಲ್ಲಿ ತೀರ್ಮಾನಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರೊನಾ ಸಂದರ್ಭದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಿಷೇಧಿಸಲಾಗಿತ್ತು, ಈಗ ಮತ್ತೆ ಅದಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ತಾವು 2016 ರಲ್ಲಿ ಸಾರಿಗೆ ಸಚಿವರಿದ್ದಾಗ ನೇಮಕಾತಿ ಮಾಡಿದ್ದು ಬಿಟ್ಟರೆ ಕಳೆದ 7 ವರ್ಷಗಳಲ್ಲಿ ಒಂದೂ ಹುದ್ದೆಯನ್ನೂ ಭರ್ತಿ ಮಾಡಿಲ್ಲ. 16 ಸಾವಿರ ಉದ್ಯೋಗಿಗಳು ನಿವೃತ್ತರಾಗಿದ್ದಾರೆ ಎಂದು ಹೇಳಿದರು.
ಕಳೆದ 5 ವರ್ಷಗಳಲ್ಲಿ ಒಂದು ಬಸ್ ಕೂಡಾ ಖರೀದಿಸಿರಲಿಲ್ಲ. ಕೊನೆಯ ವರ್ಷದಲ್ಲಿ 4 ಸಾವಿರ ಬಸ್‌ಗಳ ಖರೀದಿಗೆ ತೀರ್ಮಾನಿಸಿದ್ದರಾದರೂ ಅದು ಟೆಂಡರ್ ಪ್ರಕ್ರಿಯೆಗೆ ಸೀಮಿತವಾಯಿತು. 5 ಸಾವಿರ ಬಸ್‌ಗಳು ಶೀಘ್ರದಲ್ಲೇ ಬರಲಿವೆ ಎಂದು ತಿಳಿಸಿದರು.
ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ, ಹಾಗೂ ರಾಜ್ಯದ ವಿವಿಧ ನಗರಗಳ ಸಾರಿಗೆಗೂ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಶಕ್ತಿ ಯೋಜನೆಯಡಿ ಇದುವರೆಗೆ 43 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಪ್ರತಿ ನಿತ್ಯ 1.56 ಲಕ್ಷ ಟ್ರಿಪ್‌ಗಳಿರುತ್ತವೆ. ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಆರಂಭದಲ್ಲಿ ಅನೇಕ ಟೀಕೆಗಳು ಬಂದವು. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಮಹಿಳೆಯರು ಇದನ್ನು ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.
ಯೋಜನೆಯಡಿ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಜೂನ್ ತಿಂಗಳಲ್ಲಿ ಶೇ. 80ರಷ್ಟು ಹಣವನ್ನು ನೀಡಿದ್ದಾರೆ. ಜುಲೈನಲ್ಲಿ 293 ಕೋಟಿ ರೂ. ಬಿಡುಗಡೆಯಾಗಿದೆ, ಅಧಿಕಾರಿಗಳು ಅಂಕಿ ಅಂಶ ನೀಡಿದ ನಂತರ ಹಣ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಿಂದಾಗಿ ಮುಜರಾಯಿ ದೇವಸ್ಥಾನಗಳ ಹುಂಡಿಗೆ ಹೆಚ್ಚು ಹಣ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅರ್ಚಕರಿಗೆ ವೇತನ ಬಿಡುಗಡೆಯಲ್ಲಿ ವಿಳಂಬವಾಗುತ್ತಿರುವುದು ತಮ್ಮ ಗಮನಕ್ಕೂ ಬಂದಿದೆ. ಅವರ ಖಾತೆಗಳಿಗೆ ನೇರವಾಗಿ ಹಣ ಸಂದಾಯ ಮಾಡುವಂತೆ ಕಂದಾಯ ಕಾರ್ಯದರ್ಶಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಬಿಜೆಪಿಯಲ್ಲಿ ಉಸಿರು ಕಟ್ಟುವ ವಾತಾವರಣ ಇದ್ದುದರಿಂದ ಕೆಲವರು ಮರಳಿ ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಪಂಜರದಲ್ಲಿರುವ ಕೋಳಿಯಂತೆ ಅವರ ಪರಿಸ್ಥಿತಿಯಾಗಿತ್ತು, ಅದು ಅವರಿಗೆ ಇಷ್ಟವಾಗಲಿಲ್ಲ. ನಮ್ಮ ಪಕ್ಷದಲ್ಲಿ ಮುಕ್ತ ವಾತಾವರಣವಿದೆ. ಸ್ವಚ್ಛಂದ ಹಕ್ಕಿಗಳಂತೆ ಇರಬಹುದು ಎಂದರು.
ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಎಲ್ಲೂ ಹೇಳಿಲ್ಲ. ಅವರ ನಡುವೆ ಮುನಿಸಿದೆ ಎನ್ನುವುದು ಕೇವಲ ಊಹೆಯಾಗಿದೆ ಎಂದು ತಿಳಿಸಿದರು.
ಚಂದ್ರಯಾನಕ್ಕೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಬುನಾದಿ ಹಾಕಿದ್ದರು. ಈ ಯೋಜನೆಗಾಗಿ ವಿಜ್ಞಾನಿಗಳು ಪರಿಶ್ರಮಪಟ್ಟಿದ್ದಾರೆ ಎಂದು ಹೇಳಿದರು.