

ದಾವಣಗೆರೆ : ರಾಜ್ಯದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೊಟ್ಟೆ ನೀಡುವ ಪ್ರಸ್ತಾವ ಇದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಂಸಾಹಾರ ನೀಡಬೇಕು ಎನ್ನುವ ವಿಚಾರ ಇದೆ, ಆದರೆ ಅದು ಆಗಿಲ್ಲ. ಬಡವರಿಗೆ ಪ್ರೋಟೀನ್‌ಯುಕ್ತ ಆಹಾರ ಸಿಗಬೇಕು ಎನ್ನುವ ದೃಷ್ಟಿಯಿಂದ ಮೊಟ್ಟೆ ಕೊಡುವ ಚಿಂತನೆ ಇದೆ ಎಂದು ತಿಳಿಸಿದರು. ಇಂದಿರಾ ಕ್ಯಾಂಟೀನ್ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿದೆ. ಅವರು ಈ ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ 196 ಇಂದಿರಾ ಕ್ಯಾಂಟೀನ್ ಆರಂಭವಾಗಿದ್ದವು. ನಂತರ ಬಂದ ಸರ್ಕಾರಗಳು ಅದನ್ನು ನಿಲ್ಲಿಸಿದ್ದವು. ಕಾಂಗ್ರೆಸ್ ಸರ್ಕಾರ ಬಂದ ನಂತರ ಯೋಜನೆಗೆ ಮರುಚಾಲನೆ ಸಿಕ್ಕಿದೆ. ಈ ವರ್ಷ 186 ಹೊಸ ಇಂದಿರಾ ಕ್ಯಾಂಟೀನ್ ತೆರೆಯಲಾಗುತ್ತಿದ್ದು ಈಗಾಗಲೇ 100ಕ್ಕೂ ಹೆಚ್ಚು ಕ್ಯಾಂಟೀನ್ ಆರಂಭವಾಗಿವೆ. ಒಂದೆರಡು ತಿಂಗಳಲ್ಲಿ ಬಾಕಿ ಇರುವ ಕ್ಯಾಂಟೀನ್‌ಗಳನ್ನೂ ಆರಂಭಿಸಲಾಗುವುದು. ಇದು ಸರ್ಕಾರದ 6ನೇ ಗ್ಯಾರಂಟಿಯಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಅಗತ್ಯ ಇರಲಿಲ್ಲ. ಜನರು ಮದ್ಯ, ಗುಟ್ಕಾ, ಸಿಗರೇಟ್‌ನಂಥ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದನ್ನು ನಿಲ್ಲಿಸುವಂಥ ಕಾಯ್ದೆಗಳನ್ನು ಜಾರಿಗೆ ತರಬೇಕು. ರೈತ ಪರವಾದ, ನಿರುದ್ಯೋಗಿಗಳಿಗೆ ಅನುಕೂಲವಾಗುವಂಥ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಾರಂಪರಿಕ ತ್ಯಾಜ್ಯ ವಿಲೇವಾರಿಯ ಸಮಸ್ಯೆಯಿದೆ. ಕೆಲವು ಕಡೆ ಟೆಂಡರ್ ಕರೆದು ಕೆಲಸ ಆರಂಭಿಸಲಾಗಿದೆ ಎಂದು ತಿಳಿಸಿದರು. ಹಜ್ ಯಾತ್ರಿಗಳಿಂದ ಕೆಲವು ಬೇಡಿಕೆಗಳಿವೆ, ಅವುಗಳನ್ನು ಪರಿಶೀಲಿಸಿ ಸಿಎಂ ಜತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ನಟ ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂಬುದು ಸರ್ಕಾರದ ಸ್ಪಷ್ಟ ನಿಲುವಾಗಿದೆ ಎಂದು ಹೇಳಿದರು.