ಬಡವರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಪಣ

dvg-ssm_20250310225627772.jpg
Published on

ದಾವಣಗೆರೆ :  ಕಾಂಗ್ರೆಸ್ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸಿದೆ. ಜನರ ನಂಬಿಕೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.  ನಗರದ ಗೃಹ ಕಚೇರಿಯಲ್ಲಿ ಸೋಮವಾರ, ಇ-ಖಾತಾ ಅಭಿಯಾನದ ಅಂಗವಾಗಿ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಬಿ-ಖಾತಾ ಪ್ರಮಾಣ ಪತ್ರಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿ ಮಾತನಾಡಿದರು.  ಬಡವರ, ನಿರ್ಗತಿಕರ, ದೀನದಲಿತರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವು ಪಣ ತೊಟ್ಟಿದೆ. ಈ ಹಿಂದೆ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 15 ಸಾವಿರ ಆಶ್ರಯ ಮನೆಗಳ ನಿರ್ಮಾಣವಾಗಿದ್ದು ಪ್ರಸ್ತುತ ಒಂದೊಂದು ಮನೆಯ ಬೆಲೆ 35-40 ಲಕ್ಷ ಆಗಿವೆ. 40 ಸಾವಿರಕ್ಕೂ ಅಧಿಕ ಮನೆಗಳನ್ನು ಅಕ್ರಮ-ಸಕ್ರಮದಡಿ ವಿಲೇವಾರಿ ಮಾಡಲಾಗಿದೆ. ಇ-ಖಾತಾ ಅಭಿಯಾನದಡಿ 20 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗಲಿವೆ ಎಂದರು.  ಇ-ಖಾತಾ ಪ್ರಮಾಣಪತ್ರ ನೀಡಲು ಪಾಲಿಕೆಯಿಂದ 10 ಸಾವಿರ ರೂ. ನಿಗದಿ ಮಾಡಲಾಗಿತ್ತು. ಬಡವರಿಗೆ ಇದು ಹೊರೆಯಾಗಲಿದೆ ಎಂದು ಸಂಬಂಧಪಟ್ಟವರಿಗೆ ಸೂಚಿಸಿದ್ದರಿಂದ ಉಚಿತವಾಗಿ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ. ಜನತೆಯು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು.  ಪಾಲಿಕೆಯ ಆಯುಕ್ತೆ ರೇಣುಕಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿನ ಬೇತೂರು ರಸ್ತೆ, ಎಲ್ಲಮ್ಮನಗರ, ನಿಟುವಳ್ಳಿ, ಅಶೋಕನಗರ, ಬೂದಾಳು ರಸ್ತೆ, ಮಾಗನಹಳ್ಳಿ ರಸ್ತೆ, ಪಾಮೇನಹಳ್ಳಿ, ಬಸಾಪುರ ಸೇರಿದಂತೆ ಬಹಳಷ್ಟು ಜನರು ಇ-ಖಾತೆಗಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಸಾಂಕೇತಿಕವಾಗಿ 250 ಅರ್ಹ ಫಲಾನುಭವಿಗಳಿಗೆ ಬಿ-ಖಾತಾ ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.  ಮಾಜಿ ಮೇಯರ್ ಕೆ.ಚಮನ್ ಸಾಬ್, ಪಾಲಿಕೆಯ ಮಾಜಿ ಸದಸ್ಯರಾದ ಎ.ನಾಗರಾಜ್ ಇತರರು ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net