

ದಾವಣಗೆರೆ : ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಇನ್ನೂ ನಾಲ್ಕು ವರ್ಷಗಳ ಅಧಿಕಾರಾವಧಿ ಇದೆ. ದೇಶ ಇನ್ನಾದರೂ ಅಭಿವೃದ್ಧಿ ಕಾಣಲು ಸಚಿವ ನಿತಿನ್ ಗಡ್ಕರಿ ಪ್ರಧಾನಿಯಾದರೆ ಒಳ್ಳೆಯದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿ ಇರಬಾರದು, ಅದು ದೇಶದಿಂದ ತೊಲಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಜನಾಭಿಪ್ರಾಯ ಬಿಜೆಪಿಗೆ ಸಿಕ್ಕಿದೆ. ದೇಶದ ಒಳಿತಿಗೆ ಪ್ರಧಾನಿ ಬದಲಾಗಬೇಕು ಎಂದು ತಿಳಿಸಿದರು. ದೇಶವನ್ನು ಒಬ್ಬರೇ ನಡೆಸಲು ಸಾಧ್ಯವಿಲ್ಲ. ಕೇಂದ್ರದ ಐವರು ಸಚಿವರ ಹೆಸರು ಜನರಿಗೆ ಗೊತ್ತಿಲ್ಲ. ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀರೊ ಮಾಡಿವೆ. ದೀಪಾವಳಿಯಲ್ಲಿ ಸಿಡಿಸುವ ಪಟಾಕಿ ಕೂಡ ಚೀನಾದಿಂದ ಬರುತ್ತಿದೆ. ಹಾಗಾದರೆ ಮೇಕ್ ಇನ್ ಇಂಡಿಯಾ ಏನಾಯಿತು ಎಂದು ಪ್ರಶ್ನಿಸಿದರು. ಕುಂಭ ಮೇಳದಲ್ಲಿ ನೀರು ಕಲುಷಿತಗೊಂಡಿರುವುದನ್ನು ವರದಿಗಳು ಖಚಿತಪಡಿಸಿವೆ. ಭಕ್ತರಿಗೆ ಕಲ್ಪಿಸಿದ ವ್ಯವಸ್ಥೆಯಲ್ಲಿ ತಾರತಮ್ಯ ಮಾಡಲಾಗಿದೆ. ಶ್ರೀಮಂತರಿಗೆ ಲಕ್ಷಾಂತರ ರೂ. ಮೌಲ್ಯದ ಟೆಂಟ್‌ಗಳಿವೆ. ಬಡವರು ಪುಣ್ಯ ಸ್ನಾನಕ್ಕೆ ಹಲವು ದಿನ ಕಾಯಬೇಕಿದೆ ಎಂದರು. ಕಾಲ್ತುಳಿತದಲ್ಲಿ ಮೃತಪಟ್ಟವರ ಲೆಕ್ಕವನ್ನೂ ಸರ್ಕಾರ ಸರಿಯಾಗಿ ತಿಳಿಸಲಿಲ್ಲ. ದೆಹಲಿಯ ಸಂಸತ್ ಭವನದಿಂದ 3 ಕಿ.ಮೀ ದೂರದ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಜನರು ಪ್ರಾಣ ಕಳೆದುಕೊಂಡರು. ಸೌಜನ್ಯಕ್ಕೂ ಪ್ರಧಾನಿ ಅಲ್ಲಿಗೆ ಭೇಟಿ ನೀಡಲಿಲ್ಲ ಎಂದು ಕಿಡಿಕಾರಿದರು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಇದು ನ್ಯಾಯಕ್ಕೆ ಸಂದ ಜಯ. ದೇಶದ ಏಕೈಕ ಹಿಂದುಳಿದ ಸಮುದಾಯದ ಸಿಎಂ ಆಗಿರುವ ಸಿದ್ದರಾಮಯ್ಯ ಅವರಿಗೆ ತೊಂದರೆ ನೀಡಬೇಕು ಎಂಬ ಬಿಜೆಪಿ ಹುನ್ನಾರ ಸಫಲವಾಗಿಲ್ಲ. ಮುಡಾ ಪ್ರಕರಣದಲ್ಲಿ 14 ನಿವೇಶನಗಳ ಬಗ್ಗೆ ಮಾತ್ರ ಚರ್ಚೆ ಆಯಿತು. ಉಳಿದ ನಿವೇಶನಗಳ ಬಗ್ಗೆಯೂ ಚರ್ಚೆ ಆಗುವ ಅಗತ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. ...