

ದಾವಣಗೆರೆ : ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನಗರದ ವಿವಿಧ ಭಾಗಗಳಲ್ಲಿ ಅಂದಾಜು 6 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿದರು. ವಾರ್ಡ್ ಸಂಖ್ಯೆ 44 ರಲ್ಲಿ ಬರುವ ಮಹಾಲಕ್ಷ್ಮೀ ಬಡಾವಣೆ ಮುಖ್ಯ ರಸ್ತೆಯಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.19 ಚಾಮರಾಜಪೇಟೆ ಸರ್ಕಲ್ ಹತ್ತಿರದ ಕೆ.ಆರ್. ಮಾರುಕಟ್ಟೆ ಕಟ್ಟಡಕ್ಕೆ ರ‌್ಯಾಂಪ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.41 ವ್ಯಾಪ್ತಿಯ ಪೂನಾ ಬೆಂಗಳೂರು ರಸ್ತೆಯಲ್ಲಿರುವ ಧೋಬಿ ಘಾಟ್ಗೆ ವಿದ್ಯುತ್ ಲಾಂಡ್ರಿ ಯಂತ್ರ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಮೇಯರ್ ಕೆ.ಚಮನ್ ಸಾಬ್, ಪಾಲಿಕೆಯ ಆಯುಕ್ತೆ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ್, ಸವಿತಾ ಗಣೇಶ್ ಹುಲ್ಲುಮನೆ, ಸದಸ್ಯರಾದ ಎ. ನಾಗರಾಜ್, ರಹೀಂಖಾನ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಮಾಗಾನಹಳ್ಳಿ ಪರಶುರಾಮ್, ಕಾರ್ಮಿಕ ಮುಖಂಡ ಆವರಗೆರೆ ಉಮೇಶ್ ಇದ್ದರು.