ಜನರ ಅಹವಾಲುಗಳಿಗೆ ಕಿವಿಯಾದ ಸಚಿವ

dvg-ahavalu-sweekara.jpg
Published on

ದಾವಣಗೆರೆ : ನಗರದ ಗೃಹ ಕಚೇರಿಯಲ್ಲಿ ಶನಿವಾರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.  ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉದ್ಯೋಗಾಕಾಂಕ್ಷಿಗಳ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ, ಸರ್ಕಾರ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದ್ದು, ಅದನ್ನು ಮರು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.  ಈ ಹುದ್ದೆಗಳಿಗೆ ಡಿಪ್ಲೊಮಾ ಮತ್ತು ಪದವಿ ಕೋರ್ಸ್ ಮಾಡಿದವರು ಅರ್ಜಿ ಸಲ್ಲಿಸಬಹುದು ಎಂದು ಆದೇಶದಲ್ಲಿ ನಮೂದಿಸಲಾಗಿದೆ. ಎನ್‌ಎಚ್‌ಎಂ ಅಡಿಯಲ್ಲಿ ತಾವು ಗುತ್ತಿಗೆ ಆಧಾರದಲ್ಲಿ ಹಲವಾರು ವರ್ಷಗಳಿಂದ ಅತಿ ಕಡಿಮೆ ಸಂಬಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ನೇಮಕಾತಿ ಆದೇಶದಿಂದ ತಮಗೆ ಅನ್ಯಾಯವಾಗುತ್ತದೆ ಎಂದು ಅಳಲು ತೋಡಿಕೊಂಡರು.  ಪರೀಕ್ಷೆ ಬರೆಯುವ ನಿಯಮದಿಂದ ಮುಕ್ತಗೊಳಿಸಬೇಕು ಅಥವಾ ಕೃಪಾಂಕ ನೀಡಬೇಕು ನೀಡಬೇಕು ಎಂದು ಒತ್ತಾಯಿಸಿದರು. ಈ ವಿಷಯವನ್ನು ಸಿಎಂ ಮತ್ತು ಆರೋಗ್ಯ ಸಚಿವರ ಗಮನಕ್ಕೆ ತಂದು ತಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.  ...  * ಪೊಲೀಸ್ ಉಪ ಠಾಣೆ ಸ್ಥಾಪಿಸಿ  ಇಲ್ಲಿನ ಸರಸ್ವತಿನಗರ ಮತ್ತು ಭೂಮಿಕಾ ನಗರದ ನಾಗರಿಕರು ಸಚಿವ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ, ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.  ಬಡಾವಣೆಯಲ್ಲಿ ಕಳ್ಳತನ ಪ್ರಕರಣಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಉಪ ಠಾಣೆ ಸ್ಥಾಪಿಸಬೇಕು. ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಭದ್ರತೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಆಗ್ರಹಿಸಿದರು. ಉದ್ಯಾನವನ, ಹಾಸ್ಟೆಲ್ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.  ಬಸಾಪುರ ಗ್ರಾಮದವರು ಸಚಿವರನ್ನು ಭೇಟಿಯಾಗಿ, ಸರ್ಕಾರದಿಂದ ಹೊಲಿಗೆ ಯಂತ್ರ ಸೌಲಭ್ಯ ಕೊಡಿಸುವಂತೆ ಮನವಿ ಮಾಡಿದರು. ಕೆಲವೇ ವರ್ಗದವರಿಗೆ ಈ ಸೌಲಭ್ಯವನ್ನು ಸೀಮಿತಗೊಳಿಸದೇ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೂ ಒದಗಿಸಬೇಕು ಎಂದು ಒತ್ತಾಯಿಸಿದರು.  ಮನವಿಗಳನ್ನು ಸ್ವೀಕರಿಸಿದ ಸಚಿವ ಮಲ್ಲಿಕಾರ್ಜುನ್, ಜನರ ಅಹವಾಲುಗಳಿಗೆ ಸ್ಪಂದಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.  ನಂತರ ಸಚಿವರು ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ರಾಮಾಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಪಾಲಿಕೆ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net