

ದಾವಣಗೆರೆ : ಸರ್ಕಾರದಿಂದ ದೊಡ್ಡ ಬೂದಿಹಾಳ್ ಹಾಗೂ ಚಿಕ್ಕ ಬೂದಿಹಾಳು ಗ್ರಾಮಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮೂರು ವಿದ್ಯಾರ್ಥಿನಿಲಯ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ದೊಡ್ಡಬೂದಿಹಾಳು ಗ್ರಾಮದಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಹಾಸ್ಟೆಲ್ ಸಮಸ್ಯೆಯಿಂದ ಪರದಾಡುತ್ತಿದ್ದು, ಅವರಿಗೆ ಬಾಡಿಗೆ ಕಟ್ಟಡಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಯಾವುದೇ ವಿದ್ಯಾರ್ಥಿಯು ಹಾಸ್ಟೆಲ್ ವ್ಯವಸ್ಥೆಯಿಂದ ವಂಚಿತರಾಗದಂತೆ ಕ್ರಮವಹಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. ದೊಡ್ಡಬೂದಿಹಾಳ್‌ನಲ್ಲಿ ಒಂದು ಹಾಗೂ ಚಿಕ್ಕಬೂದಿಹಾಳು ಗ್ರಾಮದಲ್ಲಿ ಎರಡು ವಿದ್ಯಾರ್ಥಿನಿಲಯಗಳು ನಿರ್ಮಾಣ ಆಗಲಿದ್ದು, ಒಟ್ಟು 20 ಕೋಟಿ ರೂ. ವೆಚ್ಚದಲ್ಲಿ ಮೂರು ಅತ್ಯಾಧುನಿಕ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು. ಕಾಡಜ್ಜಿ, ಆವರಗೊಳ್ಳ ಗ್ರಾಮಗಳಿಗೆ ಪಶು ಆಸ್ಪತ್ರೆ ಮಂಜೂರಾಗಿವೆ. ದೊಡ್ಡ ಬೂದಿಹಾಳ್‌ನಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಅನುಮೊದನೆ ನೀಡಲಾಗಿದೆ. ಅರಸಾಪುರದಿಂದ ಕೊಂಡಜ್ಜಿವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು. ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಮುಂದಾಗಿದ್ದು, ಬಡವರು, ದೀನ ದಲಿತರ ಕೈ ಹಿಡಿಯುವ ಪಕ್ಷವಾಗಿದೆ. ಕುಂಕುಮ ಹಚ್ಚಿಕೊಂಡು ಸುಳ್ಳು ಹೇಳಿ ಗಲಾಟೆ ಸೃಷ್ಟಿಸುವವರಿಂದ ದೂರವಿರಿ ಎಂದು ಮತದಾರರಿಗೆ ಕಿವಿಮಾತು ಹೇಳಿದರು. ಪಾಲಿಕೆಯ ಮೇಯರ್ ಕೆ.ಚಮನ್‌ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಮುಖಂಡ ಬೂದಾಳ್ ಬಾಬು, ಲೋಕೋಪಯೋಗಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.