

ದಾವಣಗೆರೆ : ಬಿತ್ತನೆ ಬೀಜ, ಪೆಟ್ರೋಲ್, ಡೀಸೆಲ್, ಸ್ಟ್ಯಾಂಪ್ ಡ್ಯೂಟಿ ಬೆಲೆ ಹೆಚ್ಚಳ ಮಾಡಿ ಜನರಿಗೆ ಹೊರೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಹಾಲಿನ ದರವನ್ನು ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್ ಹೇಳಿದ್ದಾರೆ.
ರಾಜ್ಯದ 15 ಹಾಲು ಒಕ್ಕೂಟಗಳಲ್ಲಿ 7,98,691 ಹಾಲು ಉತ್ಪಾದಕ ರೈತರಿದ್ದಾರೆ. ಇವರಿಗೆ 2023ರ ಆಗಸ್ಟ್ನಿಂದ ಕಳೆದ ಮಾರ್ಚ್ ವರೆಗೆ 1083 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಇದೆ. ಇದರಿಂದ ಕೃಷಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ತಕ್ಷಣ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಹಾಲಿನ ದರ ಏರಿಕೆ ಮಾಡಿರುವ ಕ್ರಮವನ್ನು ಹಿಂಪಡೆಯದಿದ್ದರೆ ಮತ್ತು ರೈತರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡದಿದ್ದರೆ ಬಿಜೆಪಿ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.