ಎಚ್‌ಕೆಆರ್ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ

dvg-H.K.R.jpg
Published on

ದಾವಣಗೆರೆ  : ಎಚ್.ಕೆ. ರಾಮಚಂದ್ರಪ್ಪ ಯಾವುದೇ ಒಬ್ಬ ವ್ಯಕ್ತಿಗೆ ಸಂಬಂಧಿಸಿದವರಲ್ಲ, ಅವರು ಕಮ್ಯುನಿಸ್ಟ್ ಪಕ್ಷ ಮತ್ತು ಎಐಟಿಯುಸಿಯ ಸ್ವತ್ತು ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಎಚ್.ಜಿ. ಉಮೇಶ್ ಹೇಳಿದರು.  ನಗರದ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಎಐಟಿಯುಸಿ ಜಿಲ್ಲಾ ಮಂಡಳಿ ವತಿಯಿಂದ ಗುರುವಾರ ಆಯೋಜಿಸಿದ್ದ, ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಅವರ 4ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಚ್‌ಕೆಆರ್ ಅವರು ಸದಾ ಜನಪರ ಕೆಲಸ ಮಾಡುತ್ತ ಜನರ ನಾಡಿ ಮಿಡಿತಕ್ಕೆ ತಕ್ಕಂತೆ, ಸಿಪಿಐ ಆಶಯದಂತೆ ಕೆಲಸ ಮಾಡಿ ಜನಪ್ರಿಯತೆ ಪಡೆದವರು ಎಂದು ತಿಳಿಸಿದರು.  ಇಂತಹ ವ್ಯಕ್ತಿಯ ಹೆಸರನ್ನು ಕೆಲ ಭ್ರಷ್ಟ ವ್ಯಕ್ತಿಗಳು ದುರ್ಬಳಕೆ ಮಾಡಿಕೊಂಡು ಅವರ ಹೆಸರಿಗೆ ಮಸಿ ಬಳಿಯುವ ಕುತಂತ್ರ ಮಾಡುತ್ತಿದ್ದಾರೆ. ಇಂಥ ಹುನ್ನಾರಗಳು ಹೆಚ್ಚು ದಿನ ನಡೆಯುವುದಿಲ್ಲ ಎಂದರು.  ಕನ್ನಡ ಚಳವಳಿ ಹಿರಿಯ ಹೋರಾಟಗಾರ ಬಂಕಾಪುರ ಚನ್ನಬಸಪ್ಪ ಮಾತನಾಡಿ, ಸಿಪಿಐ ನುಡಿದಂತೆ ನಡೆದುಕೊಂಡಿದೆ. ಸದಾ ಜನಪರ ಕೆಲಸ ಮಾಡುತ್ತ, ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದೆ. ಜನರಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಹೋರಾಟ ಮಾಡಿದ ಪಕ್ಷ ಸಿಪಿಐ ಎಂದು ಬಣ್ಣಿಸಿದರು.  ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎಚ್.ಕೆ. ಕೊಟ್ರಪ್ಪ ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಖಜಾಂಚಿ ಮಹಮ್ಮದ್ ರಫೀಕ್, ಜಿ. ಯಲ್ಲಪ್ಪ, ಬಾಷಾ ಜಗಳೂರು, ಟಿ.ಎಚ್. ನಾಗರಾಜ್ ಹರಿಹರ, ಎಸ್.ಎಸ್. ಮಲ್ಲಮ್ಮ, ಮಳಲ್ಕೆರೆ ಜಯಮ್ಮ, ಹೊಸಳ್ಳಿ ಮಂಜಳಾ, ಐರಣಿ ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net