ಗಿರಿಜಾ ಕೊಡುಗೆಗೆ ಸಿಗಬೇಕಿತ್ತು ಹೆಚ್ಚಿನ ಗೌರವ

giri.jpg
Published on

ದಾವಣಗೆರೆ :  ಲೇಖಕಿ ಟಿ. ಗಿರಿಜಾ ಅಪ್ರತಿಮ ಕೆಲಸಗಳನ್ನು ಮಾಡಿದ್ದು ಅವರ ಕೊಡುಗೆಯನ್ನು ಸಮಾಜ ಹೆಚ್ಚಾಗಿ ಗುರುತಿಸಿ ಗೌರವಿಸಬೇಕಿತ್ತು ಎಂದು ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಅಭಿಪ್ರಾಯಪಟ್ಟರು.  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವನಿತಾ ಸಾಹಿತ್ಯ ವೇದಿಕೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ, ಟಿ. ಗಿರಿಜಾ ಅವರ 10ನೇ ವರ್ಷದ ಸಂಸ್ಮರಣೆ, ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.  ಅಧಿಕಾರ ಸ್ಥಾನ, ಶ್ರೀಮಂತಿಕೆ ಇದ್ದವರಿಗೆ ಸಹಜವಾಗಿ ದೊಡ್ಡ ಗೌರವ ಸಿಗುತ್ತದೆ, ಅವರನ್ನು ಓಲೈಸುವವರು ಇರುತ್ತಾರೆ ಎಂದು ಕೆಲ ಉದಾಹರಣೆಗಳನ್ನು ನೀಡಿ, ಗಿರಿಜಾ ಅವರಿಗೆ ಅಂಥ ಹಿನ್ನೆಲೆ ಇಲ್ಲದ ಕಾರಣಕ್ಕೆ ಹೆಚ್ಚಿನ ಗೌರವ ಸಿಗಲಿಲ್ಲವೇನೋ ಎಂದು ವಿಷಾದಿಸಿದರು.  ಗಿರಿಜಾ ರಚಿಸಿದ 3 ಕೃತಿಗಳು ಎಲ್ಲ ಕಾಲಕ್ಕೆ ಉಳಿಯುವಂಥವಾಗಿವೆ. ನಾಡಿನ ಸಾಂಸ್ಕೃತಿಕ ಜೀವಂತಿಕೆಗೆ ಸಾಕ್ಷಿಯಾಗಿವೆ. ಅವರು ನಿಷ್ಕಾಮ ಕರ್ಮಿಯಾಗಿದ್ದರು. ಅವರು ಕಟ್ಟಿಕೊಟ್ಟಿರುವ ಗ್ರಾಮಗಳ ಚರಿತ್ರೆಯ ಪುಸ್ತಕಗಳು ಸಂಶೋಧಕರಿಗೆ ಆಕರ ಕೃತಿಗಳಾಗಿವೆ ಎಂದು ತಿಳಿಸಿದರು.  ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಗ್ರಾಮಗಳ ಚರಿತ್ರೆಯನ್ನು ಬರೆದಿದ್ದು ಬಹಳ ಪರಿಶ್ರಮದ ಕೆಲಸ. ದೇಶದ 2 ಸಾವಿರ ನದಿಗಳ ಬಗ್ಗೆ ಅವರು ದಾಖಲಿಸಿರುವ ಮಾಹಿತಿ ಉಪಯುಕ್ತವಾಗಿದೆ. ಮುಂದಿನ ಪೀಳಿಗೆಗೆ ಬೇಕಾಗುವ ಕೃತಿಗಳನ್ನು ನೀಡಿದ್ದಾರೆ. ಅವರು ಬರೆದಿರುವ ಪುಸ್ತಕಗಳನ್ನು ಪ್ರತಿಯೊಂದು ಊರಿನ ಗ್ರಾ.ಪಂ. ಗ್ರಂಥಾಲಯದಲ್ಲಿ ಇಡಬೇಕು ಎಂದು ಹೇಳಿದರು.  ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಟಿ. ಗಿರಿಜಾ ಅವರ ಹೆಸರನ್ನು ನಗರದ ಮುಖ್ಯ ರಸ್ತೆಯೊಂದಕ್ಕೆ ಇಡಬೇಕು ಎಂದು ಮಹಾನಗರ ಪಾಲಿಕೆಗೆ ತಾವು ಮಾಡಿರುವ ಹಕ್ಕೊತ್ತಾಯ ಇದುವರೆಗೂ ಈಡೇರಿಲ್ಲ. ಇದರಲ್ಲಿ ಇಚ್ಛಾಶಕ್ತಿಯ ಕೊರತೆ ಕಂಡುಬರುತ್ತಿದೆ. ಈಗಲಾದರೂ ಸಂಬಂಧಪಟ್ಟವರು ಗಮನ ಹರಿಸಲಿ ಎಂದು ಆಗ್ರಹಿಸಿದರು. ಗಿರಿಜಾ ಅವರು 3 ಶ್ರೇಷ್ಠ ಕೃತಿಗಳನ್ನು ರಚಿಸಿದರು. ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಿದ್ದರು ಎಂದು ಸ್ಮರಿಸಿದರು.  ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ಪ್ರಾಸ್ತಾವಿಕ ಮಾತನಾಡಿ, ಗಿರಿಜಾ ಅವರು ತಮ್ಮ ಬದುಕನ್ನು ಸಾಹಿತ್ಯ ಸೇವೆ ಹಾಗೂ ಸಂಶೋಧನೆಗೆ ಮುಡಿಪಾಗಿಟ್ಟರು. ಅದಕ್ಕಾಗಿ ಅವರು ತೋರಿದ ಉತ್ಸಾಹ ಅಪಾರ ಎಂದು ನೆನಪಿಸಿಕೊಂಡರು.  ಇದೇ ವೇಳೆ ಕೋಮಲಾ ವಸಂತಕುಮಾರ್ ಅವರ ‘ಭಕ್ತಿ-ಭಾವ-ಲಹರಿ’ ಕವನ ಸಂಕಲನವನ್ನು ಡಾ. ಲೋಕೇಶ್ ಅಗಸನಕಟ್ಟೆ ಬಿಡುಗಡೆಗೊಳಿಸಿದರು. ಜ್ಯೋತಿಷಿ ಡಾ.ಸಿ.ಕೆ. ಆನಂದತೀರ್ಥಾಚಾರ್, ಎಸ್‌ಎಸ್ ಆಸ್ಪತ್ರೆಯ ವೈದ್ಯೆ ಡಾ. ಶಶಿಕಲಾ ಕೃಷ್ಣಮೂರ್ತಿ, ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಶೈಲಜಾ ಇದ್ದರು. ಜಯಮ್ಮ ನೀಲಗುಂದ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net