

ದಾವಣಗೆರೆ : ನಗರದಲ್ಲಿ ಕೆಲವು ಆರ್.ಟಿ.ಐ. ಕಾರ್ಯಕರ್ತರು ಸರ್ಕಾರಿ ನೌಕರರೊಂದಿಗೆ ಶಾಮೀಲಾಗಿ ನಗರದ ಪ್ರತಿಷ್ಠಿತ ಬಡಾವಣೆಗಳ ನಿವಾಸಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ವಿನಾಕಾರಣ ತೊಂದರೆ ಕೊಡುತ್ತಾ, ಹಣ ವಸೂಲಾತಿ ಮಾಡುತ್ತಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಮಾಡಿದರು. ಅವರು ಗುರುವಾರ ಜಿಲ್ಲಾಡಳಿತ ಭವನಕ್ಕೆ ತೆರಳಿ ಈ ಕುರಿತು ಮನವಿ ಸಲ್ಲಿಸಿದರು. ನೀವು ನಿರ್ಮಿಸಿರುವ ಕಟ್ಟಡಗಳಿಗೆ ಪ್ಯಾಸೇಜ್ ಬಿಟ್ಟಿಲ್ಲ, ಜಾಗವನ್ನು ಅತಿಕ್ರಮಿಸಿಕೊಂಡಿದ್ದೀರಿ, ಕಟ್ಟಡ ನಿರ್ಮಿಸಲು ಲೈಸೆನ್ಸ್ ಪಡೆದುಕೊಂಡಿಲ್ಲ ಎಂದು ಕೆಲವು ಆರ್.ಟಿ.ಐ. ಕಾರ್ಯಕರ್ತರು ಹೇಳುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ‘ನೀವು ಶಾಲೆ ನಡೆಸಲು ಅನುಮತಿ ಪಡೆದಿಲ್ಲ, ಮಕ್ಕಳ ಸಂಖ್ಯೆ ಹೆಚ್ಚಾಗಿದೆ, ಶಿಕ್ಷಕರು ಸರಿಯಾದ ವಿದ್ಯಾರ್ಹತೆ ಹೊಂದಿಲ್ಲ, ದಾಖಲಾತಿಗಿಂತ ಹೆಚ್ಚಿನ ಮಕ್ಕಳನ್ನು ತೋರಿಸಿ ಸರ್ಕಾರದ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ’ ಎಂದು ಹೇಳುತ್ತಾ ಸರ್ಕಾರಿ ಕಚೇರಿಗಳ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಸಾರ್ವಜನಿಕರಿಗೆ ವಿನಾಕಾರಣ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಹಣಕ್ಕೆ ಬೇಡಿಕೆ ಇಡುತ್ತಾ, ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್ ಇದ್ದರು.