ಗಾಂಜಾ ಮಾರಾಟ ಕಡಿವಾಣಕ್ಕೆ ಒತ್ತಾಯ

dvg-manavi.jpg
Published on

ದಾವಣಗೆರೆ : ಗಾಂಜಾ ಹಾಗೂ ನಶೆಯ ಪದಾರ್ಥಗಳ ಅನಧಿಕೃತ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಆಗ್ರಹಿಸಿದೆ.  ಪ್ರಕೋಷ್ಠದ ಪದಾಧಿಕಾರಿಗಳು ಈ ಕುರಿತು ಮಂಗಳವಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.  ಜಿಲ್ಲೆಯಲ್ಲಿ ಗಾಂಜಾ ಹಾಗೂ ಇನ್ನಿತರ ನಶೆಯ ಪದಾರ್ಥಗಳು ಯಥೇಚ್ಛವಾಗಿ ಮಾರಾಟವಾಗುತ್ತಿವೆ. ನಗರದಲ್ಲಿ, ವಿವಿಧ ತಾಲೂಕು ಮತ್ತು ಹಳ್ಳಿಗಳ ಹೊಲಗಳಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುವುದು ಸಹಜವಾಗಿದೆ. ಈ ಕೃತ್ಯ ಎಸಗುವವರಿಗೆ ಯಾವುದೇ ಹೆದರಿಕೆ ಇಲ್ಲ. ದಿನದಿಂದ ದಿನದಿನಕ್ಕೆ ಇದು ಹೆಚ್ಚಾಗುತ್ತಿದ್ದು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  ಗಾಂಜಾ ಸೇವನೆಯಿಂದ ಯುವಕರು ಹಾಗೂ ಯುವತಿಯರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಭವಿಷ್ಯ ಎದುರು ನೋಡುತ್ತಿರುವ ಪಾಲಕರ ಕನಸು ನುಚ್ಚು ನೂರಾಗುತ್ತಿದೆ. ಈಗಾಗಲೇ ಕೊಲೆ, ಸುಲಿಗೆ, ದರೋಡೆ ಹಾಗೂ ಅಪಘಾತದಂತಹ ಸಮಾಜಕ್ಕೆ ಮಾರಕವಾಗುವ ಆಘಾತಕಾರಿ ಕ್ರಿಯೆಗಳಲ್ಲಿ ಈ ಮಾದಕ ವಸ್ತುಗಳ ಪಾತ್ರವು ದೊಡ್ಡದಿದೆ ಎಂದು ಆತಂಕ ವ್ಯಕ್ತಪಡಿಸಿದರು.  ಪೊಲೀಸರು ಶೀಘ್ರ ಕಾರ್ಯ ಪ್ರವೃತ್ತರಾಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಪ್ರಕೋಷ್ಠದ ಜಿಲ್ಲಾ ಸಂಚಾಲಕ ಪಿ.ಎಸ್. ವೀರಣ್ಣ, ರಮೇಶ್ ನಾಯ್ಕ, ಜಿ. ದಯಾನಂದ್, ಪ್ರವೀಣ ಜಾಧವ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net