

ದಾವಣಗೆರೆ : ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಜೀವನೋಪಾಯ ಅಭಿಯಾನ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸಂಜೀವಿನಿ ಸ್ವ ಸಹಾಯ ಗುಂಪುಗಳ ಉತ್ಪನ್ನಗಳ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಮೇಳದಲ್ಲಿ ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು ಹಾಗೂ ನ್ಯಾಮತಿ ತಾಲೂಕಿನ ಒಟ್ಟು 39 ಸ್ವ-ಸಹಾಯ ಗುಂಪುಗಳ ಸದಸ್ಯರು ಪಾಲ್ಗೊಂಡಿದ್ದರು. ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 20ಕ್ಕೂ ಹೆಚ್ಚು ಮಳಿಗೆಗಳನ್ನು ಒದಗಿಸಲಾಗಿದೆ. ಸಾರ್ವಜನಿಕರು ವಸ್ತುಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದರು. ವಿವಿಧ ಸ್ವ-ಸಹಾಯ ಗುಂಪುಗಳು ಉತ್ಪಾದಿಸಿರುವ ತಿಂಡಿ ತಿನಿಸುಗಳು, ಆಯುರ್ವೇದಿಕ್ ಹೇರ್ ಆಯಿಲ್, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಕರ ಕುಶಲತೆಯಿಂದ ತಯಾರಿಸಿದ ವೈರ್ ಬ್ಯಾಗ್, ಜ್ಯೂಟ್ ಬ್ಯಾಗ್, ಅಲಂಕಾರಿಕ ವಸ್ತುಗಳು, ರಾಗಿ ಹಾಗೂ ಟೊಮಾಟೊದಿಂದ ಮಾಡಿದ ಹಪ್ಪಳ, ಉಪ್ಪಿನಕಾಯಿ, ಖಾರದ ಪುಡಿ ಹಾಗೂ ದೇಶಿಯವಾಗಿ ತಯಾರಿಸಿದ ಆಹಾರ ಪದಾರ್ಥಗಳು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳು ನೋಡುಗರ ಕಣ್ಮನ ಸೆಳೆದವು. ಮೇಳವನ್ನು ವೀಕ್ಷಿಸಿದ ಎಸ್ಪಿ ಉಮಾ ಪ್ರಶಾಂತ್, ಕರಕುಶಲ ವಸ್ತು, ಸಿಹಿ ತಿನಿಸು ಮುಂತಾದ ಉತ್ಪನ್ನಗಳನ್ನು ಖರೀದಿಸಿದರು. ವಸ್ತುಪ್ರದರ್ಶನ ಇನ್ನೂ 4 ದಿನ ಇರಲಿದೆ. ಮೇಳದ ಉದ್ಘಾಟನೆ ವೇಳೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ನಿರ್ದೇಶಕ ಭೋಜರಾಜ್ ಇದ್ದರು.