ಜಿಲ್ಲಾಮಟ್ಟದ ಉದ್ಯೋಗ ಮೇಳ 15 ರಂದು

Published on

ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಕೌಶಲ ಮಿಷನ್ ಸಹಯೋಗದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಮಾ. 15 ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಐಟಿಐ ಕಾಲೇಜು (ಹದಡಿ ರಸ್ತೆ) ಹಾಗೂ ಬಿಐಇಟಿ ಕಾಲೇಜಿನಲ್ಲಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. 50ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.  ಒಟ್ಟು 5 ಸಾವಿರ ಉದ್ಯೋಗಗಳು ಖಾಲಿಯಿವೆ ಎಂದು ಅಂದಾಜು ಮಾಡಲಾಗಿದ್ದು ಇದುವರೆಗೆ ಆನ್‌ಲೈನ್‌ನಲ್ಲಿ 1 ಸಾವಿರ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಆಫ್‌ಲೈನ್‌ನಲ್ಲಿ 2 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿರುವ ಜಿಲ್ಲೆಯ 6052 ನಿರುದ್ಯೋಗಿಗಳಿಗೂ ಮೇಳದಲ್ಲಿ ಭಾಗವಹಿಸುವಂತೆ ಮಾಹಿತಿ ಕಳಿಸಲಾಗಿದೆ ಎಂದರು.  ಮೇಳಕ್ಕಾಗಿ ಐಟಿಐ ಕಾಲೇಜಿನಲ್ಲಿ 40 ಕೊಠಡಿ, ಬಿಐಇಟಿ ಕಾಲೇಜಿನಲ್ಲಿ 10 ಕೊಠಡಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಅಲ್ಲಿ ನೀರು, ನೆರಳು, ಲಘು ಊಟದ ಏರ್ಪಾಟು ಮಾಡಲಾಗಿದೆ. ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿ ಬಸ್‌ಗಳ ಸಂಚಾರವೂ ಇರಲಿದೆ ಎಂದು ತಿಳಿಸಿದರು.  ಸರ್ಕಾರಿ ಐಟಿಐ ಕಾಲೇಜಿನಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಶಾಮನೂರು ಶಿವಶಂಕರಪ್ಪ ಸೇರಿದಂತೆ ಜಿಲ್ಲೆಯ ಶಾಸಕರು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸವರು. ಸಂಜೆ 5 ಗಂಟೆಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.  ನಗರದ ಹೈಸ್ಕೂಲ್ ಮೈದಾನದಲ್ಲಿ ಮಾ. 15 ರಿಂದ 5 ದಿನಗಳ ಕಾಲ ಸ್ವಸಹಾಯ ಸಂಘಗಳ ಉತ್ಪನ್ನಗಳ ವ್ಯಾಪಾರ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು 20 ಮಳಿಗೆಗಳನ್ನು ಹಾಕಲಾಗುವುದು ಎಂದು ತಿಳಿಸಿದರು.  ಜಿ.ಪಂ. ಸಿಇಒ ಸುರೇಶ ಇಟ್ನಾಳ್, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಶಿವಕುಮಾರ್ ಇದ್ದರು.  ...  (ಬಾಕ್ಸ್)  ಅರ್ಹತೆ, ಕ್ಷೇತ್ರಗಳು  ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು 18 ರಿಂದ 35 ವರ್ಷದ ಒಳಗಿನವರಾಗಿರಬೇಕು. 8ನೇ ತರಗತಿ, ಎಸ್‌ಎಸ್‌ಎಲ್‌ಸಿ ಪಾಸ್-ಫೇಲ್, ಪಿಯುಸಿ, ಬಿಎ, ಬಿ.ಕಾಂ, ಬಿಎಸ್‌ಸಿ, ಐಟಿಐ, ಡಿಪ್ಲೊಮಾ, ಬಿಇ, ಬಿ.ಟೆಕ್, ಸ್ನಾತಕೋತ್ತರ ಪದವಿ ಹಾಗೂ ಇತರ ವಿದ್ಯಾರ್ಹತೆ ಹೊಂದಿದವರು ಅರ್ಹರು.  ಐಟಿ ವಲಯ, ಹಣಕಾಸು, ಬ್ಯಾಂಕಿಂಗ್, ಮ್ಯಾನುಫ್ಯಾಕ್ಚರಿಂಗ್, ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್, ಫಾರ್ಮಸಿಟಿಕಲ್, ಬಿ.ಪಿ.ಒ ವಾಯ್ಸ, ರೀಟೈಲ್, ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್, ಆಟೋಮೋಟಿವ್, ಡೇಟಾ ಎಂಟ್ರಿ ಆಪರೇಟರ್, ಸೇವೆ ಇನ್ನಿತರ ಕ್ಷೇತ್ರಗಳಲ್ಲಿ ಉದ್ಯೋಗ ಒದಗಿಸುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net