ವೀರಶೈವ ಒಳಪಂಗಡಗಳ ಒಗ್ಗಟ್ಟು ಅಗತ್ಯ

dvg-veerasaiva.jpg
Published on

ದಾವಣಗೆರೆ  : ವೀರಶೈವ ಲಿಂಗಾಯತ ಸಮಾಜದಲ್ಲಿನ ಎಲ್ಲ ಒಳಪಂಗಡಗಳು ಒಂದಾಗಿ ಸಮಷ್ಟಿ ಪ್ರಜ್ಞೆ ಮೂಲಕ ಜತೆಯಲ್ಲಿ ಸಾಗುವ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಇದೆ ಎಂದು ಶ್ರೀ ರಂಭಾಪುರಿ ಪೀಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಬೆಂಗಳೂರಿನ ನಿವಾಸದಲ್ಲಿ ಸೋಮವಾರ ನಡೆದ, ರಂಭಾಪುರಿ, ಕಾಶಿ ಮತ್ತು ಕೇದಾರ ಜಗದ್ಗುರುಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.  ಪ್ರಸ್ತುತ ದಿನಮಾನಗಳಲ್ಲಿ ಸಮಾಜವು ಕವಲು ದಾರಿಯಲ್ಲಿ ಸಾಗುತ್ತಿದ್ದು ಇದರ ದುಷ್ಪರಿಣಾಮ ಮುಂದಿನ ಪೀಳಿಗೆಯ ಮೇಲೆ ಆಗಲಿದೆ. ಇದನ್ನು ಸರಿಪಡಿಸಲು ಡಾ.ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ಹಲವು ಪ್ರಯತ್ನ ಮಾಡುತ್ತಿದೆ. ಇದರ ಮೊದಲ ಪ್ರಯತ್ನವಾಗಿ ಜಗದ್ಗುರು ಪಂಚಾಚಾರ್ಯರ ಒಕ್ಕೂಟದ ವ್ಯವಸ್ಥೆಯ ಬಗ್ಗೆ ಸಮಾಲೋಚನೆ ನಡೆದಿದ್ದು ಮುಂದಿನ ದಿನಗಳಲ್ಲಿ ಪಂಚಪೀಠಗಳು ಮಹಾಸಭೆಯ ಕ್ರಿಯಾತ್ಮಕ ಯೋಜನೆಗಳಲ್ಲಿ ಮುಂದೆ ನಿಂತು ಸಮಾಜಕ್ಕೆ ಮಾರ್ಗದರ್ಶನ ನೀಡಲಿವೆ ಎಂದು ನುಡಿದರು.  ಕಾಶಿ ಜಗದ್ಗುರುಗಳು ಮಾತನಾಡಿ, ಡಾ.ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಸಮಾಜವು ಮತ್ತಷ್ಟು ಗಟ್ಟಿಯಾಗುತ್ತಿದೆ. ಅವರ ಆಶಯದಂತೆ ಶೀಘ್ರವಾಗಿ ಪಂಚ ಪೀಠಗಳು, ಗುರು-ವಿರಕ್ತರು ಮತ್ತು ಎಲ್ಲ ಒಳಪಂಗಡಗಳ ಮಠಾಧೀಶರು ಒಂದಾಗಿ ಸಾಗಲಿದ್ದಾರೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪ್ರಯತ್ನದಿಂದ ವೀರಶೈವ-ಲಿಂಗಾಯತ ಸಮಾಜವು ಸರ್ವ ಸಮಾಜಗಳೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.  ಕೇದಾರ ಶ್ರೀಗಳು ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರ ಜನ್ಮದಿನದ ಪ್ರಯುಕ್ತ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿರುವದು ಹೆಮ್ಮೆಯ ವಿಚಾರ. ಶಾಮನೂರು ಪರಿವಾರದ ಸಾಮಾಜಿಕ ಕಾರ್ಯಗಳು ಸರ್ವರಿಗೂ ಮಾದರಿ ಎಂದು ಹೇಳಿದರು.  ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಲಿಂ.ಹಾನಗಲ್ಲ ಕುಮಾರ ಸ್ವಾಮಿಗಳು ಹಾಕಿಕೊಟ್ಟ ಮಾರ್ಗದಲ್ಲಿ ವೀರಶೈವ ಮಹಾಸಭೆಯನ್ನು ಮುಂದುವರಿಸಿಕೊಂಡು ಹೊಗುತ್ತಿದ್ದು, ಇಂದು ನಮ್ಮ  ಮನೆಯಲ್ಲಿ ಮೂರು ಪೀಠದ ಜಗದ್ಗುರುಗಳು ಆಗಮಿಸಿರುವುದು ಸಂತೋಷ ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ಪಂಚ ಪೀಠಗಳು ಮತ್ತು ಎಲ್ಲ ಸಮಾಜದ ಮಠಾಧೀಶರಗಳು ಒಂದಾಗಿ ಸಮಾಜಕ್ಕೆ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿದರು.  ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ನಮ್ಮ ತಂದೆಯವರ ಜನ್ಮದಿನದ ಮುಂಚಿತವಾಗಿ ಪಂಚ ಪೀಠಗಳಲ್ಲಿನ ಮೂರು ಪೀಠಗಳು ನಮ್ಮ ಮನೆಗೆ ದಯಮಾಡಿಸಿದ್ದು ಮುಂದಿನ ದಿನಗಳಲ್ಲಿ ಪಂಚ ಪೀಠಗಳೊಂದಿಗೆ ಎಲ್ಲ ಮಠಾಧೀಶರು ಒಂದಾಗಿ ಸೇರಿ ಎಲ್ಲ ಸಮಾಜಗಳು ಒಂದಾಗಿ ಬಾಳುವಂತೆ ಆಶೀರ್ವಾದ ಮಾಡಬೇಕು. ಇದರಿಂದಾಗಿ ಸಮಾಜದಲ್ಲಿ ಸಾಮರಸ್ಯ ಉಂಟಾಗುತ್ತದೆ ಎಂದು ತಿಳಿಸಿದರು.  ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಸ್ವಾಗತಿಸಿದರು. ಎಡೆಯೂರು ಶ್ರೀಗಳು, ಕಣ್ವಕುಪ್ಪೆ ಶ್ರೀಗಳು, ಜಪದಕಟ್ಟೆ ಶ್ರೀಗಳು, ಚಾನುಕೋಟಿ ಶ್ರೀಗಳು, ಶಾಮನೂರು ಪರಿವಾರದ ಸದಸ್ಯರು ಮತ್ತು ಅಣಬೇರು ರಾಜಣ್ಣ, ಎಸ್.ಕೆ. ವೀರಣ್ಣ, ನಾಗಭೂಷಣ್ ಕಡೆಕೊಪ್ಪ, ಹರ್ಷವರ್ಧನ್, ಆರ್.ಟಿ. ಪ್ರಶಾಂತ್, ರೇಣುಕ ಪ್ರಸನ್ನ, ಹರೀಶ್, ವೀಣಾ ಕಾಶಪ್ಪನವರ್, ಶ್ಯಾಗಲಿ ಜಯಣ್ಣ, ಇಂದೂಧರ, ಪರುಶುರಾಮ್, ತಿಪ್ಪೇಸ್ವಾಮಿ, ರಾಜು, ಕೊಟ್ರೇಶ್, ಉಳುವಯ್ಯ, ವಾಗೀಶ್ ಸ್ವಾಮಿ, ವಿಕಾಸ್, ಸುನಂದಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net