

ಹೊನ್ನಾಳಿ : ರಸ್ತೆ ದುರಸ್ತಿ ಕಾಮಗಾರಿಗಳು ಕಳಪೆಯಾಗದಂತೆ ನೋಡಿಕೊಳ್ಳಿ. ಗುತ್ತಿಗೆದಾರರೊಂದಿಗೆ ಶಾಮೀಲಾಗಬೇಡಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಲೋಕೋಪಯೋಗಿ ಎಇಇ ಕಣುಮಪ್ಪ ಅವವಿಗೆ ತಾಕೀತು ಮಾಡಿದರು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊನ್ನಾಳಿ-ಶಿವಮೊಗ್ಗ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚುವ ಕಾಮಗಾರಿಯೂ ಕಳಪೆಯಾಗಿದೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿವೆ. ಈಗ ಮಾಡುತ್ತಿರುವ ಡಾಂಬರೀಕರಣ ಕಾವಗಾರಿ ಕಳಪೆಯಾಗಿದೆ. ಕಿತ್ತು ಹೋದರೆ ಜನರಿಗೆ ನಾನು ಏನು ಉತ್ತರಕೊಡಲಿ ಎಂದು ಪ್ರಶ್ನಿಸಿದರು.
12 ಸಾವಿರ ಕಾರ್ಡ್ ನಕಲಿ: ಕಾರ್ಮಿಕ ಇಲಾಖೆಯಲ್ಲಿ ಸುಮಾರು 22 ಸಾವಿರ ಜನ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿದ್ದಾರೆ ಎಂದು ಅಧಿಕಾರಿ ಮುಮ್ತಾಜ್ ಬೇಗಂ ಮಾಹಿತಿ ನೀಡಿದರು.
ಮಧ್ಯ ಪ್ರವೇಶಿಸಿದ ಶಾಸಕರು, ಎಷ್ಟು ಜನ ನಕಲಿ ಕಾರ್ಡ್ ಮಾಡಿಸಿದ್ದಾರೆ ಎಂದು ಪ್ರಶ್ನಿಸಿದರು. ಆಗ ಪತ್ರಕರ್ತರೊಬ್ಬರು 12 ಸಾವಿರಕ್ಕೂ ಹೆಚ್ಚು ನಕಲಿ ಕಾರ್ಡ್‌ಗಳವೆ ಎಂದು ಹೇಳಿದರು. ಆದಷ್ಟು ಬೇಗ ನಕಲಿ ಕಾರ್ಡ್‌ಗಳನ್ನು ಪತ್ತೆ ಹಚ್ಚಬೇಕು. ಅರ್ಹರಿಗೆ ಸೌಲಭ್ಯಗಳನ್ನು ಕೊಡುವ ಕೆಲಸ ಮಾಡಿ ಎಂದು ಹೇಳಿದರು.
ಪಡಿತರ ಚೀಟಿ ರದ್ದು: ಹೊನ್ನಾಳಿ ತಾಲೂಕಿನಲ್ಲಿ ಆದಾಯ ತೆರಿಗೆ ಪಾವತಿಸುವವರು 62 ಜನ, ವಾರ್ಷಿಕ ಆದಾಯ 1.20 ಲಕ್ಷ ಮಿತಿ ಮೀರಿರುವವರು 98 ಜನ ಸೇರಿ ಒಟ್ಟು 160 ಜನರ ಪಡಿತರ ಚೀಟಿಗಳನ್ನು ಹಾಗೂ ನ್ಯಾಮತಿ ತಾಲೂಕಿನಲ್ಲಿ ಆದಾಯ ತೆರಿಗೆ ಪಾವತಿಸುವವರು 32 ಜನ, ವಾರ್ಷಿಕ ಆದಾಯ ಮಿತಿ 1.20 ಲಕ್ಷ ಮೀರುವವರು 75 ಜನ ಸೇರಿ ಒಟ್ಟು 107 ಜನರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆಯ ನಾಗರಾಜ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮುಂದೆ ಯಾವುದೇ ಪಡಿತರ ಚೀಟಿಗಳನ್ನು ರದ್ದುಪಡಿಸದಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಹೇಳಿದರು.
ಕೃಷಿ ಇಲಾಖೆ : ಕೃಷಿಭಾಗ್ಯ ಯೋಜನೆಯಡಿ ಶೇ. 80 ರಷ್ಟು ಸಹಾಯಧನದಡಿ ಕೃಷಿ ಹೊಂಡ, ತಂತಿಬೇಲಿ ಸೇರಿ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ ಮಾಹಿತಿ ನೀಡಿದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕು ಸೇರಿ ಒಟ್ಟು 80 ಕೃಷಿ ಹೊಂಡಗಳ ನಿರ್ಮಾಣ ಗುರಿ ಹೊಂದಲಾಗಿದೆ. ಅವಳಿ ತಾಲೂಕುಗಳಲ್ಲಿ ಜೂನ್‌ನಲ್ಲಿ 997 ಹೆಕ್ಟೇರ್, ಅಕ್ಟೋಬರ್‌ನಲ್ಲಿ 322 ಹೆಕ್ಟೇರ್ ಬೆಳೆಹಾನಿಯಾಗಿದೆ ಎಂದು ಸಭೆ ಗಮನಕ್ಕೆ ತಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಸೋಮ್ಲನಾಯ್ಕ ಮಾತನಾಡಿ, ಶುದ್ಧ ಕುಡಿಯುವ ನೀರು ಘಟಕಕ್ಕೆ ಪೂರೈಸುತ್ತಿರುವ ವಿದ್ಯುತ್ ಬಾಕಿ ಹೊನ್ನಾಳಿ ತಾಲೂಕಿನಿಂದ 39 ಲಕ್ಷ ರೂ., ನ್ಯಾಮತಿ ತಾಲೂಕಿನಿಂದ 23 ಲಕ್ಷ ರೂ. ಬರಬೇಕಾಗಿದೆ ಎಂದರು.
ಶಿಕ್ಷಣ ಇಲಾಖೆ: ಸರ್ಕಾರ ಒಂದು ಮೊಟ್ಟೆಗೆ 6 ರೂ. ನೀಡುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ 7 ರೂ. ಬೆಲೆ ಇದೆ. ಸರ್ಕಾರ 7 ರೂ. ನೀಡಿದರೆ ಮೊಟ್ಟೆ ಪೂರೈಕೆ ಮಾಡಬಹುದು. ಇಲ್ಲದಿದ್ದರೆ ಶಿಕ್ಷಕರು ಕೈಯಿಂದ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ಶಾಸಕರ ಗಮನಕ್ಕೆ ತಂದರು. ಮುಂದಿನ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆಯುವುದಾಗಿ ಶಾಸಕ ಶಾಂತನಗೌಡ ಹೇಳಿದರು.
ಅವಳಿ ತಾಲೂಕುಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ಸೈಬರ್ ಕ್ರೈಂ ಮತ್ತು ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಿಪಿಐ ಸುನೀಲ್‌ಕುಮಾರ್ ಹೇಳಿದರು. ಸಾಸ್ವೇಹಳ್ಳಿಯ ಮಹಿಳೆಯೊಬ್ಬರು ಹಣ ದ್ವಿಗುಣದ ಆಮಿಷಕ್ಕೆ ಬಲಿಯಾಗಿ 7 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತೋಟಗಾರಿಕೆ, ಪಶು, ಬೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಬಿಸಿಎಂ, ಸಮಾಜ ಕಲ್ಯಾಣ, ಅರಣ್ಯ ಮತ್ತಿತರ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿ ನೀಡಿದರು.
ತಾಪಂ ಇಒ ಎಚ್.ಎಸ್. ಪ್ರಕಾಶ್, ನ್ಯಾಮತಿ ಇಒ ರಾಘವೇಂದ್ರ ಉಪಸ್ಥಿತರಿದ್ದರು.