ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ಗೆ 2 ಎಕರೆ ಜಮೀನು

dvg-single-window-meeting.jpg
Published on

ದಾವಣಗೆರೆ :   ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಕೇಂದ್ರವನ್ನು ಸ್ಥಾಪಿಸಲು ಸಾರಥಿ-ಕುರುಬರ ಹಳ್ಳಿಯಲ್ಲಿ 2 ಎಕರೆ ಜಮೀನು ಒದಗಿಸಲು, ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಲೋಕಸಭೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಜಾಗ ನೀಡಿದರೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಜಾಗವನ್ನು ಅಂತಿಮಗೊಳಿಸುವಂತೆ ಸೂಚನೆ ನೀಡಿದರು.  ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಜೆ.ಎಚ್. ಪಟೇಲ್ ನಗರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸ್ವಂತ ಕಟ್ಟಡವಿಲ್ಲ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡದಲ್ಲಿ ಹೆಚ್ಚಿನ ಸ್ಥಳಾವಕಾಶ ಇಲ್ಲ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.  ಈ ಉದ್ದೇಶಕ್ಕಾಗಿ ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿ 2 ಎಕರೆ ಜಮೀನು ಗುರುತಿಸಲಾಗಿತ್ತು. ಅದು ನಗರದಿಂದ 13 ಕಿ.ಮೀ. ದೂರದಲ್ಲಿದೆ. ಸಾಮಾನ್ಯ ಮೂಲಸೌಕರ್ಯಗಳ ಕೊರತೆ ಇದೆ. ಅಲ್ಲಿ ಕೇಂದ್ರವನ್ನು ಸ್ಥಾಪಿಸುವುದು ಸೂಕ್ತವಲ್ಲ ಎಂದು ಮಾಹಿತಿ ನೀಡಿದರು.  ನಗರದ ಘನತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವ ಕಚ್ಚಾ ವಸ್ತುಗಳನ್ನಾಗಿ ತಯಾರಿಸುವ ಘಟಕವನ್ನು 9.53 ಕೋಟಿ ರೂ. ಹೂಡಿಕೆ ಮಾಡಲು ಎಚ್.ಪಿ.ಸಿ. ಎಕೋ ರಿಸೈಕ್ಲೀನರ್ ಸಂಸ್ಥೆಯು ಮುಂದೆ ಬಂದಿದೆ. ಅವರಿಗೆ ಕರೂರು ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡುವ ಕುರಿತು ಚರ್ಚಿಸಲಾಯಿತು.  ಡಿಸಿ ಗಂಗಾಧರ ಸ್ವಾಮಿ ಮಾತನಾಡಿ, ದಾವಣಗೆರೆಯಲ್ಲಿ ಕೈಗಾರಿಕೆಗಳೇ ಇಲ್ಲ. ಖಾಸಗಿ ಸಂಸ್ಥೆಗಳು ಉದ್ಯಮ ಸ್ಥಾಪನೆಗೆ ಮುಂದೆ ಬಂದರೆ ಪ್ರೋತ್ಸಾಹ ನೀಡೋಣ. ಅಂಥವರಿಗೆ ಆದ್ಯತೆ ನೀಡಿ ಎಂದು ತಿಳಿಸಿದರು.  ತ್ಯಾಜ್ಯ ವಿಲೇವಾರಿ ಬಹಳ ಅಗತ್ಯವಾಗಿದೆ. ಇ-ತ್ಯಾಜ್ಯ, ಅವಧಿ ಮುಗಿದ ಬ್ಯಾಟರಿಗಳ ವಿಲೇವಾರಿಯ ಬಗ್ಗೆಯೂ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದರು.  ಜಿ.ಪಂ. ಉಪ ಕಾರ್ಯದರ್ಶಿ ಕೃಷ್ಣಾ ನಾಯ್ಕ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್, ಕೆ.ಐ.ಎ.ಡಿ.ಬಿ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣಪ್ಪ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಕೈಗಾರಿಕೋದ್ಯಮಿಗಳಾದ ಪಿ.ಆರ್. ನಾಯ್ಡು (ಹರಿಹರ), ಸಿದ್ದನಗೌಡರು, ಟಿ.ಎಂ. ಪ್ರಸಾದ್, ಸುರೇಶ್ ಇದ್ದರು.  ...  (ಬಾಕ್ಸ್)  ಮೂಲಸೌಲಭ್ಯಕ್ಕೆ ಒತ್ತಾಯ  ಲೋಕಿಕೆರೆ ರಸ್ತೆಯಲ್ಲಿರುವ ಕೆ.ಎಸ್.ಎಸ್.ಐ.ಡಿ.ಸಿ ಕೈಗಾರಿಕಾ ವಸಾಹತುವಿನಲ್ಲಿ ಮೂಲಸೌಲಭ್ಯಗಳ ಕೊರತೆ ಇರುವ ಬಗ್ಗೆ ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಪ್ರಸ್ತಾಪಿಸಿದರು.  ಈ ಪ್ರದೇಶವು 2003 ರಲ್ಲೇ ಮಹಾನಗರ ಪಾಲಿಕೆಗೆ ಹಸ್ತಾಂತರಗೊಂಡಿದೆ. ಆಗಿನಿಂದಲೂ ನಾವು ಕಂದಾಯ ಪಾವತಿಸುತ್ತ ಬಂದಿದ್ದೇವೆ. ಇದುವರೆಗೂ ಅಲ್ಲಿ ರಸ್ತೆಗಳು ಅಭಿವೃದ್ಧಿಯಾಗಿಲ್ಲ, ಬೀದಿ ದೀಪಗಳಿಲ್ಲ, ಒಳ ಚರಂಡಿ, ಮಳೆನೀರು ಚರಂಡಿ, ಕುಡಿಯುವ ನೀರಿನ ಸಮಸ್ಯೆಗಳು ಬಗೆಹರಿದಿಲ್ಲ. ಈಗ ಅಲ್ಲಿನ ಕೆ.ಐ.ಎ.ಡಿ.ಬಿಯ ಕೈಗಾರಿಕಾ ಪ್ರದೇಶವನ್ನೂ ಪಾಲಿಕೆಗೆ ಹಸ್ತಾಂತರ ಮಾಡಲು ಪ್ರಯತ್ನ ನಡೆದಿದ್ದು ಅದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದರು.  ಹರಿಹರದ ಕೈಗಾರಿಕಾ ವಸಾಹತುವಿನಲ್ಲೂ ಮೂಲಸೌಲಭ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಎನ್.ಸಿ. ಹನುಮಂತ ರಾವ್ ಹೇಳಿದರು.  ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಪ್ರಾಮಾಣಿಕವಾಗಿ ಕಂದಾಯ ಕಟ್ಟಿದರೂ ಸರ್ಕಾರದಿಂದ ಸೌಲಭ್ಯ ದೊರೆಯುತ್ತಿಲ್ಲ ಎಂದು ತಿಳಿಸಿದರು.    * ಬೀದಿದೀಪ ಕಳಪೆ ಕಾಮಗಾರಿ  ದಾವಣಗೆರೆ ಲೋಕಿಕೆರೆ ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದಲ್ಲಿ ಕೈಗೊಂಡಿರುವ ಬೀದಿ ದೀಪಗಳ ಅಳವಡಿಕೆ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಗುತ್ತಿಗೆದಾರರು ಅಳವಡಿಸಿದ ಎಲ್ಲ ಬೀದಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿದ್ಯುತ್ ಕೇಬಲ್‌ಗಳನ್ನು ಭೂಮಿಯ ಆಳದಲ್ಲಿ ಅಳವಡಿಸದೆ, ಮೇಲ್ಭಾಗದಲ್ಲಿ ಅಳವಡಿಸಿರುವುದರಿಂದ ಅಪಾಯಕ್ಕೆ ಎಡೆ ಮಾಡಿಕೊಟ್ಟಂತಿದೆ ಎಂದು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಆರೋಪಿಸಿದರು.  ಈ ಬಗ್ಗೆ ಬೆಸ್ಕಾಂ ಇಂಜಿನಿಯರುಗಳಿಂದ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಆದೇಶ ನೀಡಿದರು.  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net