ಶಾಲೆ, ಅಂಗನವಾಡಿಗಳ ಸುಸ್ಥಿತಿಗೆ ಕ್ರಮ

dvg-secretary-meeting.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಶಾಲೆಗಳು ಮತ್ತು ಅಂಗನವಾಡಿ ಕಟ್ಟಡಗಳ ದುರಸ್ತಿ ಕೈಗೊಂಡು ಅವುಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ಸೂಚನೆ ನೀಡಿದರು.  ಜಿಲ್ಲಾಡಳಿತ ಭವನದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈ ಬಗ್ಗೆ ಸಿಎಂ ನಿರ್ದೇಶನ ನೀಡಿದ್ದು ಗಂಭೀರವಾಗಿ ಪರಿಗಣಿಸಿ, ಮಕ್ಕಳಿಗೆ ತೊಂದರೆಯಾಗದಂತೆ ಆದ್ಯತೆಯ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.  ಅಂಗನವಾಡಿ ಹಾಗೂ ಶಾಲೆಗಳಿಗೆ ನಿವೇಶನ ಒದಗಿಸಬೇಕು. ಕುಡಿಯುವ ನೀರು, ಶೌಚಗೃಹ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.  ಮುಂಗಾರು ಮಳೆಯಿಂದ ಆಗಿರುವ ಹಾನಿಯ ಬಗ್ಗೆ ನಡೆದ ಚರ್ಚೆಯ ವೇಳೆ, ಜಿಲ್ಲೆಯಲ್ಲಿ 243 ಶಾಲಾ ಕೊಠಡಿಗಳು, 70 ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಮಳೆಯಿಂದ 730 ಹೆಕ್ಟೇರ್ ಕೃಷಿ ಬೆಳೆ, 68 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು ಜಂಟಿ ಸಮೀಕ್ಷೆ ನಡೆಯುತ್ತಿದೆ. 65 ಮನೆಗಳು ಸಂಪೂರ್ಣ, 47 ಭಾಗಶಃ ಹಾನಿಗೊಳಗಾಗಿವೆ. 53 ಕಿ.ಮೀ. ರಸ್ತೆ ದುರಸ್ತಿಯಾಗಬೇಕಿದೆ. 287 ವಿದ್ಯುತ್ ಕಂಬ, 2 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ ಎಂದರು.  ತುಂಗಾ ನಾಲೆಗೆ ಹಾನಿಯಾಗಿದ್ದು ಜೋಳದ ಬೆಳೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಘಟನೆಯ ಬಗ್ಗೆ ಉಪ ವಿಭಾಗಾಧಿಕಾರಿ ವರದಿ ಸಲ್ಲಿಸಲಿದ್ದಾರೆ. ಒಂದು ವಾರದೊಳಗೆ ನಾಲೆ ದುರಸ್ತಿಯಾಗಲಿದೆ ಎಂದು ತಿಳಿಸಿದರು.  ಜಿಲ್ಲೆಯಲ್ಲಿ 102 ಕಂದಾಯ ಮುಕ್ತ ಗ್ರಾಮಗಳನ್ನು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 42 ಗ್ರಾಮಗಳ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಇರುವ ಹಳ್ಳಿಗಳಲ್ಲೂ ಮುಗಿದ ನಂತರ ಡಿಜಿಟಲೀಕರಣ ಮಾಡಿ ಮುಖ್ಯಮಂತ್ರಿ ಅವರಿಂದ ಉದ್ಘಾಟಿಸುವ ಉದ್ದೇಶವಿದೆ ಎಂದು ಡಿಸಿ ಹೇಳಿದರು.  ಕೆಲವು ಹಾಸ್ಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿರುವುದು ಗಮನಕ್ಕೆ ಬಂದಿದ್ದು ಅಂಥ ಕಡೆ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅನಿರೀಕ್ಷಿತ ಭೇಟಿ ನೀಡಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.  ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net