ಶಿಷ್ಟಾಚಾರ ಪಾಲಿಸದ ಅಧಿಕಾರಿಗಳಿಗೆ ತರಾಟೆ

dvg-kdp-meeting-30.jpg
Published on

ದಾವಣಗೆರೆ  ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ 2024-25 ನೇ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಅಧಿಕಾರಿಗಳ ವರ್ತನೆಯ ಬಗ್ಗೆ ಜನಪ್ರತಿನಿಧಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಯಿತು.  ಅಧಿಕಾರಿಗಳು ಶಿಷ್ಟಾಚಾರವನ್ನು ಪಾಲಿಸುತ್ತಿಲ್ಲ, ನಮಗೆ ಗೌರವ ಕೊಡುತ್ತಿಲ್ಲ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.  ಸಭೆಯ ಆರಂಭದಲ್ಲೇ ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ, ನೂತನ ಜಿಲ್ಲಾಧಿಕಾರಿಯಿಂದ ಹಿಡಿದು ಬಹಳಷ್ಟು ಅಧಿಕಾರಿಗಳು ಇದುವರೆಗೂ ತಮ್ಮನ್ನು ಭೇಟಿ ಮಾಡಿಲ್ಲ. ಮತ್ತೆ ಕೆಲವು ಅಧಿಕಾರಿಗಳು ಕಾನೂನು ಹೇಳುತ್ತಾರೆಯೆ ಹೊರತು ಕೆಲಸ ಮಾಡಿಕೊಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.  ದಲಿತ ಶಾಸಕ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದೀರಾ?, ಮತದಾರರಿಂದ ಆಯ್ಕೆಯಾಗಿರುವ ನನಗೆ ಬೆಲೆ ಇಲ್ಲವೆ ಎಂದು ಪ್ರಶ್ನಿಸಿ ಸಭೆಯಿಂದ ನಿರ್ಗಮಿಸಲು ಮುಂದಾದರು. ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಮತ್ತು ಎಸ್ಪಿ ಉಮಾ ಪ್ರಶಾಂತ್ ಅವರು ಸಮಾಧಾನ ಪಡಿಸಿದ ನಂತರ ಕುಳಿತುಕೊಂಡರು.  ದೇವೇಂದ್ರಪ್ಪ ಅವರ ಮಾತಿಗೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಧ್ವನಿಗೂಡಿಸಿದರು. ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ. ಸಚಿವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿ 6 ತಿಂಗಳಾದರೂ ಅಧಿಕಾರಿಗಳು ಪ್ರಗತಿ ವರದಿಯನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಜನಪ್ರತಿನಿಧಿಗಳನ್ನು ಭೇಟಿ ಮಾಡಬೇಕಾದುದು ಅಧಿಕಾರಿಗಳ ಕರ್ತವ್ಯ. ಅಧಿಕಾರಿಗಳಿಗೆ ಎಂಎಲ್ಸಿಗಳು ಯಾರು ಎನ್ನುವುದೂ ಗೊತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.  ಮತ್ತೊಬ್ಬ ಎಂಎಲ್ಸಿ ಕೆ.ಎಸ್. ನವೀನ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ನಡೆಯುವ ಸಭೆಗಳ ಬಗ್ಗೆ ನನಗೆ ನೋಟಿಸ್ ಬರುತ್ತಿಲ್ಲ ಎಂದು ಗಮನ ಸೆಳೆದರು.  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಜಿಲ್ಲೆಗೆ ಕೆಲವು ಅಧಿಕಾರಿಗಳು ಹೊಸದಾಗಿ ವರ್ಗಾವಣೆಯಾಗಿ ಬಂದಿದ್ದಾರೆ. ಸಭೆಯ ನಂತರ ಅವರನ್ನು ಕರೆದು ಮಾತನಾಡೋಣ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net