

ದಾವಣಗೆರೆ ನಗರದ ಅಖ್ತರ್ ರಜ್ಹಾ ಸರ್ಕಲ್ನಿಂದ ಸರ್ ಮಿರ್ಜಾ ಇಸ್ಮಾಯಿಲ್ ನಗರದ ಮೂಲಕ ಮಗಾನಹಳ್ಳಿ ರಸ್ತೆ ಸಂಪರ್ಕಿಸುವ 120 ಅಡಿ ರಸ್ತೆ ಕಾಮಗಾರಿಯ ಟೆಂಡರ್ ಅನ್ನು 15 ದಿನಗಳಲ್ಲಿ ಅಂತಿಮಗೊಳಿಸಿ ಕೆಲಸ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚಿಸಿದರು. ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ನಡೆದ ಪ್ರಾಧಿಕಾರದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 120 ಅಡಿ ಅಗಲದ ರಸ್ತೆ 300 ಮೀಟರ್ ಮಾತ್ರ ನಿರ್ಮಾಣ ಬಾಕಿ ಇದೆ. ಇದರಿಂದ ವರ್ತುಲ ರಸ್ತೆಯಲ್ಲಿ ಬರುವ ವಾಹನಗಳಿಗೆ ತೊಂದರೆಯಾಗಿದೆ. ಈ ರಸ್ತೆ ನಿರ್ಮಾಣವಾದಲ್ಲಿ ನಗರದೊಳಗಿನ ವಾಹನ ದಟ್ಟಣೆ ಕಡಿಮೆಯಾಗಲಿದ್ದು ಜನರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು. ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿ, ತಾಂತ್ರಿಕ ಬಿಡ್ ಪರಿಶೀಲಿಸಿ ಆರ್ಥಿಕ ಬಿಡ್ ತೆರೆಯಲು ಸರ್ಕಾರಕ್ಕೆ ಸಲ್ಲಿಸಲಾಗಿದೆ. 15 ದಿನಗಳೊಳಗಾಗಿ ಅನುಮೋದನೆ ಪಡೆದು ಕಡಿಮೆ ಬಿಡ್ ಮಾಡಿದ ಗುತ್ತಿಗೆದಾರರಿಗೆ ಸಾಮರ್ಥ್ಯ ಆಧರಿಸಿ ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು. ನಗರದ ಪ್ರಮುಖ ರಸ್ತೆ ಮಾರ್ಗಗಳಲ್ಲಿ ನಿವೇಶನಗಳು ಇರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಅಂತಹ ಸ್ಥಳಗಳಿಗೆ ಸೂಕ್ತವಾದ ಪರಿಹಾರ ಅಥವಾ ಬದಲಿ ಸ್ವತ್ತನ್ನು ನೀಡಿ ಸ್ವಾಧೀನ ಮಾಡಿಕೊಂಡು ಸಾರ್ವಜನಿಕ ಹಿತದೃಷ್ಟಿಯಿಂದ ಅಭಿವೃದ್ಧಿ ಮಾಡಲು ಸಭೆ ಅನುಮೋದನೆ ನೀಡಿತು. ಕುಟುಂಬದ ಆಸ್ತಿಯಲ್ಲಿ ಪಾಲುದಾರಿಕೆಯಡಿ ಚಿಕ್ಕ ಚಿಕ್ಕ (10-5 ಗುಂಟೆಗಳಲ್ಲಿ) ನಿವೇಶನ ವಿಂಗಡಣೆ ಮಾಡಿಕೊಳ್ಳುವವರಿಗೆ ಅನವಶ್ಯಕವಾಗಿ ತೊಂದರೆಯಾಗದಂತೆ ನಿಯಮಬದ್ಧವಾಗಿ ಶೀಘ್ರ ಅನುಮತಿ ನೀಡಲು ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವರು ತಿಳಿಸಿದರು. ಶಾಸಕರಾದ ಕೆ.ಎಸ್. ಬಸವಂತಪ್ಪ, ಬಿ.ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ. ಸಂತೋಷ್, ಪ್ರಾಧಿಕಾರದ ಆಯುಕ್ತ ಹುಲ್ಲುಮನಿ ತಿಮ್ಮಣ್ಣ, ಪಾಲಿಕೆ ಆಯುಕ್ತೆ ರೇಣುಕಾ ಇದ್ದರು. ... ಚರ್ಚೆ, ತೀರ್ಮಾನ * ಕುಂದುವಾಡ ಬಳಿ ಹೊಸ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದ್ದ ಜಾಗದ ರೈತರಿಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಭೂಮಿ ಮಾರಾಟ, ಒಪ್ಪಂದ ಇನ್ನಿತರ ಪ್ರಕ್ರಿಯೆಗಳಿಗೆ ಆಗುತ್ತಿರುವ ಅಡಚಣೆ ಸರಿಪಡಿಸಲು ಸೂಚನೆ * ನಾಗರಿಕ ನಿವೇಶನ (ಸಿಎ ಸೈಟ್) ಮಂಜೂರಾದರೂ ಸರ್ಕಾರಕ್ಕೆ ಹಣ ತುಂಬದ 17 ಸಂಘ ಸಂಸ್ಥೆಗಳಿಗೆ ನೋಟಿಸ್ * ಕರೂರು ರಸ್ತೆ, ಆವರಗೆರೆ ಕೆಪಿಟಿಸಿಎಲ್ ಸಂಪರ್ಕ ರಸ್ತೆ ಬಗ್ಗೆ ಚರ್ಚೆ * ಬಿಸಿಎಂ ಹಾಸ್ಟೆಲ್‌ಗಳಿಗೆ ಸಿಎ ನಿವೇಶನ ...