ವೈದ್ಯ ವಿದ್ಯಾರ್ಥಿಗಳಿಗೆ ರೋಗಿಗಳೇ ಶಿಕ್ಷಕರು

dvg-jjm-college_20241030012545660.jpg
Published on

ದಾವಣಗೆರೆ : ವೈದ್ಯಕೀಯ ವಿದ್ಯಾರ್ಥಿಗಳಿಗೆ ರೋಗಿಗಳೇ ನಿಜವಾದ ಶಿಕ್ಷಕರು ಎಂದು ಜೆಜೆಎಂ ಮೆಡಿಕಲ್ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ. ಮಂಜುನಾಥ ಆಲೂರು ಹೇಳಿದರು.  ನಗರದ ಬಾಪೂಜಿ ಸಭಾಂಗಣದಲ್ಲಿ ಮಂಗಳವಾರ, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಸ್ತುತ ಸಾಲಿನ ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.  ಆಸ್ಪತ್ರೆಯ ವಾರ್ಡ್‌ಗಳಲ್ಲಿ ಹೋದಾಗ ರೋಗಿಗಳಿಂದ ಕಲಿಯುವುದು ಬಹಳ ಇರುತ್ತದೆ. ತರಗತಿಯಲ್ಲಿ ಪ್ರಾಧ್ಯಾಪಕರಿಂದ ಪಡೆಯುವ ಜ್ಞಾನದ ಜತೆಗೆ ರೋಗಿಗಳ ಒಡನಾಟದಲ್ಲಿ ತಿಳಿಯುವ ಸಂಗತಿಗಳು ಅನೇಕ ಎಂದು ಅಭಿಪ್ರಾಯಪಟ್ಟರು.  ಸಮಾಜದಲ್ಲಿ ವೈದ್ಯರ ಬಗ್ಗೆ ಸದ್ಭಾವನೆಯಿದೆ. ಇದೊಂದು ಗಂಭೀರವಾದ ವೃತ್ತಿಯಾಗಿದೆ. ರೋಗಿಗಳ ಬಗ್ಗೆ ಕಾಳಜಿ ಇರಬೇಕು. ಅವರ ಭಾವನೆಗಳನ್ನು ಅರಿಯಬೇಕು ಎಂದು ತಿಳಿಸಿದರು.  ಇತರ ವಿದ್ಯಾರ್ಥಿಗಳಿಗೂ, ವೈದ್ಯಕೀಯ ಶಿಕ್ಷಣಾರ್ಥಿಗಳಿಗೂ ವ್ಯತ್ಯಾಸವಿದೆ. ಬದ್ಧತೆಯಿಂದ ಓದಬೇಕು. ನಡವಳಿಕೆ ಸುಧಾರಿಸಿಕೊಳ್ಳಬೇಕು. ಆಸಕ್ತಿ ಮತ್ತು ಏಕಾಗ್ರತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು. ಎಲ್ಲರೊಂದಿಗೂ ಸ್ನೇಹದಿಂದ ಇರಬೇಕು. ಈ ವಯಸ್ಸಿನಲ್ಲಿ ಹಲವು ಆಕರ್ಷಣೆಗಳಿರುತ್ತವೆ, ಎಚ್ಚರಿಕೆಯಿಂದ ಇರಬೇಕು. ಪಾಲಕರು ಹಾಗೂ ಶಿಕ್ಷಕರ ಬಗ್ಗೆ ಗೌರವ ಇರಬೇಕು. ಇದೆಲ್ಲದರ ಜತೆಗೆ ವಿದ್ಯಾರ್ಥಿ ಜೀವನದ ಗುರಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.  ಜೆಜೆಎಂ ವೈದ್ಯಕೀಯ ಕಾಲೇಜಿಗೆ ಅದರದೇ ಆದ ವಿಶೇಷತೆಯಿದೆ. ಇಲ್ಲಿ ಓದಿದವರು ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಈ ಕಾಲೇಜಿಗೆ ಒಳ್ಳೆಯ ಹೆಸರಿದೆ ಎಂದು ತಿಳಿಸಿದರು.  ಉತ್ತಮ ಮೂಲಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಜೆಜೆಎಂ ಕಾಲೇಜಿಗೆ ಹೊಂದಿಕೊಂಡಂತೆ ಚಿಗಟೇರಿ ಜಿಲ್ಲಾಸ್ಪತ್ರೆ, ಬಾಪೂಜಿ ಆಸ್ಪತ್ರೆ ಇವೆ. ಆಧುನಿಕ ವೈದ್ಯಕೀಯ ಉಪಕರಣಗಳಿವೆ. ದೊಡ್ಡ ಗ್ರಂಥಾಲಯವಿದೆ. ಸಂಶೋಧನೆಯಲ್ಲಿ ನಂ. 1 ಇದ್ದೇವೆ. ವೈದ್ಯವಿಜ್ಞಾನ ಸಂಬಂಧ ಉಪಯುಕ್ತ ಚರ್ಚೆಗಳನ್ನು ಮಾಡಲಾಗುತ್ತದೆ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಬೇಕು ಎಂದರು.  ಕಾಲೇಜಿನ ಪ್ರಾಚಾರ್ಯೆ ಡಾ. ಶುಕ್ಲಾ ಎಸ್. ಶೆಟ್ಟಿ ಮಾತನಾಡಿ, ಶಿಸ್ತು ಮತ್ತು ಬದ್ಧತೆಯಿಂದ ವಿದ್ಯಾರ್ಥಿ ಜೀವನ ಕಳೆಯುವಂತೆ ತಿಳಿಸಿದರು.  ಅಂದಿನ ಪಾಠಗಳನ್ನು ಅದೇ ದಿನ ಮನನ ಮಾಡಿಕೊಳ್ಳುವ ಮೂಲಕ ನಿರಂತರತೆ ಕಾಯ್ದುಕೊಳ್ಳಬೇಕು. ಗ್ರಂಥಾಲಯ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.  ವೈದ್ಯ ವೃತ್ತಿಯು ಪವಿತ್ರವಾಗಿದ್ದು ಮಾನವೀಯ ಸೇವೆಗೆ, ಆ ಮೂಲಕ ದೇಶ ಸೇವೆಗೆ ಒಳ್ಳೆಯ ಅವಕಾಶವಿದೆ. ಇದನ್ನು ವಿದ್ಯರ್ಥಿಗಳು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ವೇಳೆ ಕಾಲೇಜು ನಡೆದು ಬಂದ ದಾರಿಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.  ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದ ಡಾ. ಅರುಣ್ ಅಜ್ಜಪ್ಪ, ಪ್ರಾಧ್ಯಾಪಕರಾದ ಡಾ. ವರದೇಂದ್ರ ಕುಲಕರ್ಣಿ, ಡಾ. ಸ್ಮೈಲಿ, ಡಾ. ಮಂಜುನಾಥ ತೆಂಬದ್, ಡಾ.ಎಂ.ಎಸ್. ಅನುರೂಪಾ ಇದ್ದರು. ಡಾ.ಡಿ. ನಿರ್ಮಲಾ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net