

ದಾವಣಗೆರೆ : ಔಷಧ ಕ್ಷೇತ್ರದಲ್ಲಿ ಅನೈತಿಕ ಮಾರಾಟ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಪಾಲಿಕೆ ಮುಂಭಾಗ ಧರಣಿ ನಡೆಸಿದ ಸಂಘದ ಕಾರ್ಯಕರ್ತರು ನಂತರ ಬೈಕ್ ರ‌್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಔಷಧ ಕ್ಷೇತ್ರದಲ್ಲಿ ಅನೈತಿಕ ಮಾರಾಟ ದಂಧೆಗೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಅವಶ್ಯಕ ಜೀವರಕ್ಷಕ ಔಷಧಗಳನ್ನು ಕಡಿಮೆ ದರದಲ್ಲಿ ದೊರಕಿಸುವ ಅವಕಾಶಗಳಿದ್ದರೂ ಕೇಂದ್ರ ಸರ್ಕಾರ ಅದಕ್ಕೆ ಗಮನ ನೀಡುತ್ತಿಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರ ಔಷಧಗಳ ಎಂಆರ್‌ಪಿ ಮೇಲೆ ಪ್ರತಿವರ್ಷ ಶೇ.10ರಷ್ಟು ಬೆಲೆ ಹೆಚ್ಚಿಸುವ ಅವಕಾಶ ನೀಡಿದ್ದು, ಇದರಿಂದಾಗಿ ಇಡೀ ಆರೋಗ್ಯ ಕ್ಷೇತ್ರವೇ ಖಾಸಗಿಯವರ ದಾಳಕ್ಕೆ ಸಿಲುಕಿದೆ. ಇದರ ಪರಿಣಾಮ ಚಿಕಿತ್ಸೆ ಪಡೆಯುವುದು ಸಂಪೂರ್ಣ ಹಣದ ವ್ಯವಹಾರದ ಮೇಲೆ ನಿಂತಿದ್ದು, ಇದರಿಂದ ರೋಗಿಗಳ ಜೀವ ಸದಾ ಅಪಾಯದಲ್ಲಿದೆ ಎಂದು ತಿಳಿಸಿದರು.
ಅಲ್ಲದೆ, ಔಷಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಾರಾಟ ಪ್ರತಿನಿಧಿಗಳಿಗೆ ಯಾವುದೇ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಇಲ್ಲ. ಕಾರ್ಮಿಕ ಕಾನೂನು ಉಲ್ಲಂಘನೆ ನಡೆಯುತ್ತಲೇ ಇದ್ದು, ಹಲವು ವರ್ಷಗಳಿಂದ ಬೆಂಗಳೂರಿನ ಔಷಧ ಕಂಪನಿಗಳ ದಾಖಲೆ ಪರಿಶೀಲಿಸಲು ಒತ್ತಾಯ ಮಾಡಿದ್ದರೂ ರಾಜ್ಯ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಇದೀಗ ಕಾರ್ಮಿಕ ಕಾನೂನು ತಿದ್ದುಪಡಿ ಮಾಡುವ ಮೂಲಕ ನಾಲ್ಕು ಕಾರ್ಮಿಕ ಸಂಹಿತೆ ಜಾರಿ ಮಾಡಿರುವುದರಿಂದ ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇದ್ದ ಎಸ್‌ಪಿಇ ಕಾಯ್ದೆ ರದ್ದಾಗಲಿದೆ. ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಪ್ರತಿನಿಧಿಗಳ ಪ್ರವೇಶ ನಿರ್ಬಂಧ, ಸೇವಾ ಷರತ್ತುಗಳ ವಿಧಿಸಿರುವುದು ಮಾರಾಟ ಪ್ರತಿನಿಧಿಗಳ ಮೇಲೆ ನಡೆಯುತ್ತಿರುವ ಶೋಷಣೆ ಹಾಗೂ ಸಂವಿಧಾನ ವಿರೋಧಿ ನಡೆ ಎಂದು ಖಂಡಿಸಿದರು.
ಆದ್ದರಿಂದ ಅನಾವಶ್ಯಕ ಹಾಗೂ ಹಾನಿಕಾರಕ ಔಷಧಗಳನ್ನು ತೆಗೆದುಹಾಕಬೇಕು, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾನೂನು ಕಠಿಣವಾಗಿ ಅನುಸರಿಸಬೇಕು ಹಾಗೂ ಕಾರ್ಮಿಕ ಕಾನೂನು ಔಷಧ ಮಾರಾಟ ಪ್ರತಿನಿಧಿಗಳಿಗೂ ಅನ್ವಯ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಚ್. ಆನಂದರಾಜು, ರಾಜ್ಯ ಕಾರ್ಯದರ್ಶಿ ಎ. ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ಲೋಹಿತಾಶ್ವ, ಅಫ್ರೋಜ್ ಅಹಮದ್, ಎಚ್. ರಾಜು, ಶ್ರೀಧರ್, ಶ್ರೀಧರಮೂರ್ತಿ, ಶಶಿ ಆಚಾರ್, ಶ್ರೀಕಾಂತ್, ಗಿರೀಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.