

ದಾವಣಗೆರೆ : ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯಿಂದಾಗಿ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳು ಸೃಷ್ಟಿಯಾಗಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಹಾಗೂ ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ, ಪತ್ರಕರ್ತರಿಗೆ ಮಹಾತ್ಮ ಗಾಂಧಿ ಸೇವಾ ಮಾಧ್ಯಮ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ಕ್ಷೇತ್ರ ಬಹಳ ವಿಶಾಲವಾದುದು. ಧೈರ್ಯವಾಗಿ ಪ್ರಶ್ನೆ ಕೇಳುವ ಗಟ್ಟಿತನ ಪತ್ರಕರ್ತರಿಗಿದೆ. ಅನೇಕ ಪತ್ರಕರ್ತರು ಅವರದೇ ಆದ ಅಸ್ತಿತ್ವ ರೂಪಿಸಿಕೊಂಡಿದ್ದಾರೆ. ಸಮಾಜದಲ್ಲಿ ಉನ್ನತ ಗೌರವ ತಂದುಕೊಡುವ ಶಕ್ತಿ ಮಾಧ್ಯಮ ಕ್ಷೇತ್ರಕ್ಕಿದೆ. ಸುದ್ದಿ ಬರೆಯುವುದಷ್ಟೇ ಅಲ್ಲದೇ ಜೀವನ ರೂಪಿಸುವ ಸಾಮರ್ಥ್ಯ ನೀಡುತ್ತಿದೆ ಎಂದರು. ಮಾಧ್ಯಮ ರಂಗವು ಎಂಬತ್ತರ ದಶಕದ ನಂತರ ಬಹಳಷ್ಟು ಬದಲಾವಣೆ ಕಂಡಿದೆ. ಟಿವಿ ಬಂದಾಗ ಒಂದು ರೀತಿಯ ಪರಿವರ್ತನೆ ಆಯಿತು. ಡಿಜಿಟಲ್ ರೂಪ ಹೊರಬಂದ ಬಳಿಕ ಹೊಸ ಆಯಾಮವನ್ನೇ ಸೃಷ್ಟಿಸಿತು. ಇಂಟರ್‌ನೆಟ್ ಜಗತ್ತನ್ನೇ ಒಂದುಗೂಡಿಸುವ ಸಾಮರ್ಥ್ಯ ಬೆಳೆಸಿಕೊಂಡಿತು ಎಂದು ಹೇಳಿದರು. ಇಪ್ಪತ್ತೊಂದನೇ ಶತಮಾನ ಡಿಜಿಟಲ್‌ಯುಗವಾಗಿದೆ. ಮುಂದಿನ ದಿನಗಳಲ್ಲಿ ಇಂಟರ್‌ನೆಟ್ ಇಲ್ಲದೇ ಟಿವಿ ನೋಡುವುದು ಉಪಗ್ರಹದ ಉಡಾವಣೆಯಿಂದ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಪತ್ರಿಕೋದ್ಯಮ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸದ ಬಳಿಕ ಸಿನಿಮಾ, ಟಿವಿ, ಪತ್ರಿಕೆ, ರೇಡಿಯೋ ಹೊರತಾಗಿಯೂ ಟಿವಿ ಧಾರಾವಾಹಿಗಳಿಗೆ ಕಂಟೆಂಟ್ ಬರೆದುಕೊಡಬಹುದು. ಕಾರ್ಪೊರೇಟ್ ಕಮ್ಯೂನಿಕೇಶನ್, ಸೋಷಿಯಲ್ ಮೀಡಿಯಾ ಮ್ಯಾನೇಜ್ಮೆಂಟ್ ಹೀಗೆ ಹಲವಾರು ಅವಕಾಶಗಳಿವೆ. ಓದಲು, ಬರೆಯಲು ಹಾಗೂ ಮಾತನಾಡುವುದು ಬಂದರೆ ಎಲ್ಲ ಕ್ಷೇತ್ರದಲ್ಲಿ ತೊಡಗಿಕೊಳ್ಳಬಹುದು ಎಂದು ಸಲಹೆ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ್ ಮಾತನಾಡಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಪರಿಸರ ಕಾಳಜಿ, ಆರೋಗ್ಯ ಶಿಬಿರ, ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತ ಬಂದಿದೆ. ಟ್ರಸ್ಟ್ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ಮಾತನಾಡಿ, ಪ್ರಸ್ತುತ ಪತ್ರಿಕೋದ್ಯಮ ಕ್ಷೇತ್ರ ಸಂಕ್ರಮಣ ಪರಿಸ್ಥಿತಿಯಲ್ಲಿದೆ. ಪತ್ರಿಕೆಗಳನ್ನು ನಡೆಸಲು ಖರ್ಚು ಹೆಚ್ಚಾಗಿದೆ. ಕರೊನಾ ಬಳಿಕ ಅನೇಕ ಪತ್ರಕರ್ತರು ಕೆಲಸ ಕಳೆದುಕೊಂಡರು. ಇದೀಗ ಪರಿಸ್ಥಿತಿ ಚೇತರಿಸಿಕೊಂಡಿದ್ದು ಅವಕಾಶಗಳಿವೆ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ವಿವಿ ಕುಲಸಚಿವ ಪ್ರೊ.ಯು.ಎಸ್. ಮಹಾಬಲೇಶ್ವರ, ಪ್ರೊ.ಲೋಲಾಕ್ಷಿ, ಡಾ.ಆರ್. ಲಕ್ಷ್ಮೀ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದ್ದರು.